ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!

ಹೊಸ್ತಿಲಾಚೆ ಬೆತ್ತಲೆ  08


ಬಹುಶಃ ಅವರ ಅಪ್ಪ ಅನ್ನೊನು ಅವನ ಪಾಲಿಗೆ ಎಂದೋ ಇಲ್ಲದಾಗಿದ್ದರೆ ಹಳ್ಳಿಯಲ್ಲಿ ಒಂದೊತ್ತು ಗಂಜಿಯೊಂದಿಗೆ ದಿನಗಳನಾದರೂ ತಳ್ಳುತ್ತಿದ್ದನೊ ಏನೊ! ಅವ್ವ  ಸತ್ತು ಹೋಗಿದ್ದು ನೆನಪಿಲ್ಲ. ಅವತ್ತಿಂದಲೇ ಅಥವಾ ಅದಕ್ಕಿಂತ ಮೊದಲೇ ಆತ ಕುಡಿಯಲು ಆರಂಭಿಸಿದ್ದ. ಅದೂ ಅಂತಿಂಥ ಕುಡಿತವಲ್ಲ. ಮಗನನ್ನು ಸ್ಕೂಲ್‍ನಿಂದ ಎಳೆತಂದು ಗಾರೆಯ ಕೆಲಸಕ್ಕೆ ಬಿಸಾಕಿ ಬಂದ ಹಣದಲ್ಲೂ ಕುಡಿದು ತೂರಾಡಿದ್ದ. ಇರುವ ಒಂದು ಸಣ್ಣ ಮನೆಯೂ ದೊಡ್ಡಪ್ಪ ಅನ್ನುವವನ ಪಾಲಾಗಿತ್ತು. ಬದುಕು ಆರಂಭವಾಗುವ ಮೊದಲೇ ಮುಗಿದು ಹೋಗಿತ್ತು. ಸಾಲದಕ್ಕೆ ಮೀಸೆ ಮೂಡಿದ್ದೊಂದೇ ನೆಪ ಮಾಡಿಕೊಂಡು ಅವನಿಗೊಂದು ಮದುವೆ ಮಾಡಿ ಬಿಸಾಕಿದ್ದನು ತಂದೆ! ಕುಡಿದು ಕುಡಿದು, ಕುಡಿದಿರುವ ಸ್ಥಿತಿಯಲ್ಲೇ ಆತ ಸತ್ತು ಹೋಗಿಬಿಟ್ಟ.




ಕೆಲವು ತಂದೆ ತಾಯಿಗಳು ಮಕ್ಕಳಿಗೆ ಸಾಕಷ್ಟು ಆಸ್ತಿ ಮಾಡಿ ಸೋಮಾರಿಗಳನ್ನಾಗಿ ಮಾಡಿ ಹೋಗುತ್ತಾರೆ. ಕೆಲವರು ದುಡಿಯುವುದನ್ನು ಹೇಳಿಕೊಟ್ಟು ಹೋಗುತ್ತಾರೆ. ಕೆಲವರು ಎಲ್ಲಾ ಕಿತ್ತು ಬೆತ್ತಲೆ ಮಾಡಿ ನಡು ಬೀದಿಯಲ್ಲಿ ನಿಲ್ಲಿಸಿ ಹೋಗುತ್ತಾರೆ.

ಮನೆಯಲ್ಲ. ಊರಲ್ಲೊಂದು ಆಶ್ರಯವಿಲ್ಲ. ಕೈಯಲ್ಲಿ ತಾನು ಕಲಿತ ಗಾರೆ ಕೆಲಸವೊಂದಿತ್ತು. ಪಕ್ಕದಲ್ಲಿ ನಂಬಿ ಬಂದ ಹೆಂಡತಿಯಿದ್ದಳು. ಕೈಲಾಗದವನಂತೆ ಹೆಂಡತಿಯನ್ನು ತವರಿಗೆ ಕಳಿಸಿ ತಾನೂ ಅಲ್ಲೇ ಹೋಗಿ ಜಾಂಡ ಊಡುವವನಲ್ಲ ಈತ. ಅವಳಿಗಾಗಿಯಾದರೂ ಆತ ಒಂದು ಕಡೆ ನಿಲ್ಲಬೇಕಾಗಿತ್ತು. ಒಂಚೂರು ನೆರಳು ಬೇಕಿತ್ತು. ಯಾರ್ ಯಾರದೋ ಕಾಲು ಕೈಗಳನ್ನು ಮುಟ್ಟಿ ನಗರದ ಕಟ್ಟಡದ ಮೇಸ್ತ್ರಿಯಲ್ಲಿ ಒಂದು ಕೂಲಿ ಕೆಲಸ ಪಡೆದುಕೊಂಡ. ಅಲ್ಲಿನ ಕೆಲಸಗಾರರೊಂದಿಗೆ ಜೊತೆಯಾದ. ಹೆಂಡತಿ ಗಂಡನ ಜೋಡಿ ಕೂಲಿಗಿಳಿದಳು. ಸದ್ಯಕ್ಕೆ ಉಳಿಯಲು ಕಟ್ಟುತ್ತಿರುವ ಅದೇ ಕಟ್ಟದ ಒಂದು ಮೂಲೆ. ರಸ್ತೆಯಲ್ಲಿ ಸತ್ತು ಬಿದ್ದರು ಕಣ್ಣಾಯಿಸದ ನಗರ, ಕುಡಿಯುವ 200 ಎಂಎಲ್ ನೀರಿಗೂ ನಗುವ ಗಾಂಧಿ ನೋಟು ಕೇಳುವ ಜನ. ಮೂಲೆಯಲ್ಲಿ ಇವನದೊಂದು ಸಂಸಾರ. ಕೈಹಿಡಿದವಳ ದುರದೃಷ್ಟ ಹೊಂದಿಕೊಳ್ಳದೇ ವಿಧಿಯಿಲ್ಲ. ದಿನಗಳು ಕಳೆದಂತೆ ಮೇಸ್ತ್ರಿಯು ಸಾಮಾನು ತುಂಬುವ ಹಳೆಯ ಶೆಡ್‍ನಲ್ಲಿ ವಾಸಕ್ಕಿಳಿದರು. ಸಾಲದೆಂಬಂತೆ ಅವನ ಹೆಂಡತಿ ಗರ್ಭಿಣಿಯಾಗಬೇಕೆ? ಗರ್ಭಿಣಿಯಾದ ಮಾತ್ರಕ್ಕೆ ಮನೆಯ ಜೋಕಾಲಿ ಮೇಲೆ ಜೀಕಿ ಕಾಲ ಕಳೆಯಲು ಅವಳೇನು ಸ್ಥಿತಿವಂತನ ಹೆಂಡತಿಯೇ!? ಹೊಟ್ಟೆಯಲ್ಲಿ ಬೆಳೆಯುವ ಮಗು ಇಟ್ಟು ಕೊಂಡು ಇಟ್ಟಿಗೆ ಹೊತ್ತಳು. ತುಂಬು ಬಸುರಿಯಾದರೂ ಹೊಟ್ಟೆ ತುಂಬಲು ಕೆಲಸ ಮಾಡಲೇ ಬೇಕಿತ್ತು!


ಏಟು ಬಿದ್ದ ಜಾಗದಲ್ಲಿ ಮತ್ತೆ ಮತ್ತೆ ಏಟು ಸಾಮಾನ್ಯ! ನಾಲ್ಕನೇ ಅಂತಸ್ತಿನ ಕಟ್ಟಡದ ಕೆಲಸ ಸಾಗಿತ್ತು. ಗರ್ಭಿಣಿ ಕೆಳಗೆ ಇಟ್ಟಿಗೆ ಜೋಡಿಸಿಕೊಡುತ್ತಿದ್ದರೆ ಉಳಿದು ಹಾಳುಗಳು ರಾಟೆಗೆ ಕಟ್ಟಿ ಮೇಲಕ್ಕೆ ಕಳುಹಿಸುತ್ತಿದ್ದರು. ಮೇಲೆ ಕಾದು ನಿಂತು ಇಟ್ಟಿಗೆಯ ದೋಣಿ ಬಂದ ತಕ್ಷಣ ಇಟ್ಟಿಗೆಗಳನ್ನು ಸುರಿದು ಕೊಂಡು ಮತ್ತೆ ಕೆಳಗೆ ಕಳುಹಿಸುವುದು ಅವನ ಕೆಲಸ. ಹೀಗೆ ಮೂರಾಲ್ಕು ಬಾರಿ ಸಾಗಿದೆ. ಅದೊಮ್ಮೆ ಒಂದರಗಳೊಂದು ಬೆಸೆದುಕೊಂಡ ರಾಟೆಯ ಹಗ್ಗ ಬಿಡಿಸಲು ಹೋಗಿ ಕಾಲು ಜಾರಿದೆ. ‘ಅಯ್ಯೋ, ಅಮ್ಮಾ!’ ಎಂದು ಕೂಗಿದ್ದಾನೆ. ಏನಾಯ್ತು ಅಂತ ಎಲ್ಲರೂ ಮೇಲೆ ನೋಡುವ ಸಮಯಕ್ಕಾಗಲೇ ಗೋಡೆಗಳಿಂದ ಆಚೆಗೆ ಬಂದಿದ್ದ ರಾಡುಗಳಿಂದ ಹೊಟ್ಟೆ ಸೀಳಿಸಿಕೊಂಡು ನೆಲಕ್ಕೆ ಬಿದ್ದಿದ್ದಾನೆ. ತಲೆಯ ಕೆಳಬಾಗದಿಂದ ರಕ್ತ ತಗ್ಗನ ದಾರಿ ಹಿಡಿದು ಹರಿದಿದೆ ಅವನ ಜೀವದಂತೆ. ಉಸಿರು ಯಾವಾಗ ನಿಂತು ಹೋಗಿತ್ತೋ ಯಾರಿಗೆ ಗೊತ್ತು. ಹೊಟ್ಟೆಯಲ್ಲಿ ಮಗುವಿಟ್ಟು ಗೋಳಾಡಿದಳು. ಅತ್ತಳು, ಮೂರ್ಛೆ ಹೋದಳು. ಎಚ್ಚೆತ್ತು ಬಾಡಿ ನೋಡಬೇಕಿತ್ತು ; ಸಮಾಧಿಸಲು ಬಂಧುಗಳು ಇಲ್ಲೂ ಬಾಡಿ ಎತ್ತಲು ಬಾಂಧವರು ಇಲ್ಲ. ದೇಹ ಹೇಗೋ ವಿಲೇವಾರಿಯಾದೀತು! ಆದರೆ
ಕಿತ್ತು ತಿನ್ನುವ ಸಮಾಜದ ಮುಂದೆ ಆಕೆಯ ನಾಳೆ ದಿನಗಳು!? ಬದುಕು ಇಷ್ಟೊಂದು ಘೋರವಾಗಬಾರದು!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05