ಅವ್ನನೆಲ್ಲಿ ಹೋಗ್ತಾನೆ, ಅಲ್ಲಿ ಗಣಪತಿ ಮಾಡೊ ಹತ್ರ ಇರ್ತಾನೆ!
ಆಗಾಗ ಬಾಲ್ಯ ಕಳ್ಳನಂತೆ ಕದ್ದು ನೋಡುತ್ತದೆಯಾದರೂ ಭೂಮಿಗೆ ಗಣೇಶ ಬರುತ್ತಾನೆ ಅನ್ನೊ ಈ ದಿನ ಈ ಗಣೇಶ ಬದಲೂ ಬಾಲ್ಯದ ಗಣೇಶನೇ ನನ್ನನ್ನು ನಡೆಸಿದಂತಿದೆ! ಇಲ್ಲಿ ಬಾಲ್ಯ ಬರೀ ಇಣುಕುವುದಿಲ್ಲ ಬದಲಿಗೆ ಆವರಿಸಿಕೊಳ್ಳುತ್ತದೆ. ಆರ್ಕೇಸ್ಟ್ರಾ, ಕುಣಿತ, ಚಂದಾ, ಕೋಮುಗಲಾಭೆ, ಅದ್ದೂರಿತನ ಯಾವುದೂ ನನಗೆ ಅರಿವಾಗದಷ್ಟು ಬಾಲ್ಯ ತುಂಬಿಕೊಳ್ಳುತ್ತದೆ. ಯಾರ್ಯಾರ ಪಾಲಿಗೆ ಗಣೇಶ ಏನಾಗಿ ಬರುತ್ತಾನೋ ನಾ ಅರಿಯೇ! ನನ್ನ ಪಾಲಿಗೆ ಗಣೇಶ ಬಾಲ್ಯದ ಐಕಾನ್. ಪ್ರತಿ ವರ್ಷ ನಾನು ಈ ದಿನವನ್ನು ಇಷ್ಟಪಡಲಿಕೆ ಇದೊಂದೇ ಕಾರಣ ನನಗೆ.
ಬಾಲ್ಯ ವೆಂದರೆ ಬಾಲ್ಯವೇ! ಅದು ಅಂದಿನ ಬಾಲ್ಯ. ಈಗಿನಂತೆ ಮೊಬೈಲ್ ಗೇಮ್, ಬರೀ ಹೋಂ ವರ್ಕ್ ಮಾಡುವಷ್ಟು ಆ ಬಾಲ್ಯ ಕೆಟ್ಟು ಹೋಗಿರಲಿಲ್ಲ. ಶಾಲೆಯ ಗಂಟೆ ಬಾರಿಸಿದಷ್ಟೇ ಸಾಕು ನಮಗೆ ಉಸೇನ್ ಬೋಲ್ಟ್ ನಾಚುವಂತೆ ಮತ್ತು ಶಾಲೆಯೇ ನಮ್ಮನ್ನು ಹಿಡಿಯಲು ಅಟ್ಟಿಸಿಕೊಂಡು ಬೆನ್ನತ್ತಿ ಬಂದಿದೆಯೇನೊ ಎನ್ನುವಂತೆ ಓಟ ಕೀಳುತ್ತಿದ್ದೇವು. ಮನೆಯ ಹೊರಗೆ ನಿಂತು ಪಾಟಿಗಂಟನ್ನು ಮನೆಯೊಳಗೆ ಎಸೆದು ಕಮ್ಮಾರ ಮನೆ ಮುಂದೆ ಹಾಜರ್! ನಾವು ಹೋದ ತಕ್ಷಣ ಅವರು ತಲೆನೋವೇ ಬಂತೇನೊ ಅನ್ನುವಂತೆ ಕೋಪಿಸಿಕೊಳ್ಳುತ್ತಿದ್ದರು. ಅವರು ಕೆರೆಯಿಂದ ಮಣ್ಣು ತಂದು ಕೊನೆಯಲ್ಲಿ ಗಣೇಶನನ್ನು ಗಿರಾಕಿಗಳ ಕೈಗೆ ನೀಡುವವರೆಗಿನ ಪ್ರತಿದಿನದ ಹಾಜರಿ ಅಲ್ಲಿ ನಮ್ಮದು.
ಅದು ನಮ್ಮೂರ ಕಮ್ಮಾರ ಮನೆ. ಗಣಪತಿ ಮಾಡುವ ನಮ್ಮೂರಿನ ಏಕೈಕ ಮನೆ. ಒಂದು ತಿಂಗಳು ಮೊದಲೇ ಆರಂಭವಾಗುತ್ತಿತ್ತು ಅವರ ಕಾರ್ಯ. ಮಣ್ಣು ತಂದು, ಹದ ಹಾಕಿ, ಅದಕ್ಕೆ ಹತ್ತಿ ಸೇರಿಸಿ ಕಲಸಿ, ಕುಟ್ಟಿ, ಕಾಲಲ್ಲಿ ತುಳಿದು ಏನೆಲ್ಲಾ ಮಾಡಿದ ಮೇಲೆ ಗಣಪನ ಮಾಡುವ ಮಣ್ಣು ಸಿದ್ದವಾಗುತ್ತಿತ್ತು. ಗಣೇಶನನ್ನು ಕಟ್ಟುವ ಕಾರ್ಯ ಅವನು ಕೂರುವ ಪೀಠದಿಂದ ಆರಂಭ. ಕಾಲು, ಹೊಟ್ಟೆ, ಕೈ, ತಲೆ ಸೊಂಡಿಲು ಹೀಗೆ ಸಾಗುತ್ತಿತ್ತು. ಹೊಟ್ಟೆ ಊದಿಕೊಂಡಂತೆ ಕಾಣಲು ದೊಡ್ಡ ಮಣ್ಣಿನ ಮಡಿಕೆ ಇಡುತ್ತಿದ್ದು ನಮಗೆ ಅತ್ಯಂತ ಕೂತೂಹಲದ ವಿಷಯವಾಗಿತ್ತು. ಪುಟ್ಟ ಪುಟ್ಟ ಗಣೇಶನಿಂದ ಹಿಡಿದು ದಡಿಯ ಗಣೇಶನವರೆಗೂ ಮಾಡಿದ್ದನ್ನು ಆ ಬಾಲ್ಯದ ಕಣ್ಣುಗಳು ತುಂಬಿಕೊಂಡಿದ್ದವು. ಬಣ್ಣ ಗಿಣ್ಣ ಬಳಿದುಕೊಂಡು ಸಿದ್ದವಾದ ಗಣೇಶನಿಗೆ ಪೂಜೆ ವಗೈರೆಗಳು. ಅಂದು ಕಮ್ಮಾರ ತುಳಿದ ಮಣ್ಣಿಗೆ ಇಂದು ಗಣೇಶ ಮೂರ್ತಿಯಾಗಿ ಪೂಜೆ ಸಿಗುತ್ತಿದೆ ಅನಿಸುತ್ತಿತ್ತು. ಭಕ್ತಿಯಿಂದ ಕೈ ಮುಗಿಯುತ್ತಿದ್ದೆವು. ನಮ್ಮಗಳ ಮನೆಯಲ್ಲಿ 'ಅವನ್ನೆಲ್ಲಿ ಹೋಗ್ತಾನೆ, ಅಲ್ಲೇ ಗಣಪತಿ ಮಾಡೋ ಕಮ್ಮಾರ ಮನೆ ಹತ್ರ ಇರ್ತಾನೆ ನೋಡ್ರಿ' ಅನ್ನೋರು. ಊರಿನ ಎಲ್ಲಾ ಮಕ್ಕಳು ಎಲ್ಲಿ ಸಿಗದೇ ಇದ್ರೂ ಅಲ್ಲಿ ಸಿಗ್ತಾ ಇದ್ರು. ಎಲ್ಲೂ ಹುಡುಕದೇ ಅಲ್ಲಿಗೆ ಬಂದು ನಾಲ್ಕು ತದುಕಿ ಎಳೆದುಕೊಂಡು ಹೋಗೋರು. ಮತ್ತೆ ಅವರನ್ನು ಮರೆಸಿ ಅಲ್ಲಿಗೆ ಬರುತ್ತಿದ್ದುವು. ಸಿದ್ದವಾದ ಗಣಪಗಳು ಅಲ್ಲಿಂದ ಬೇರೆ ಬೇರೆ ಕಡೆಗೆ ಎತ್ತಿನ ಬಂಡಿಯಲ್ಲಿ ಸಾಗುತ್ತಿದ್ದವು. ನಮ್ಮೂರ ದೇವಸ್ಥಾನದ ಮುಂದೆ ಹಾಜರಾಗುವ ಗಣೇಶ ದೊಡ್ಡೋನು! ಅಲ್ಲಿ ವಾರದ ತಯಾರಿ. ಚಿಕ್ಕ ಚಿಕ್ಕ ಮಣ್ಣಿನ ಗುಡ್ಡಗಳನ್ನು ಮಾಡಿ ಅಲ್ಲಿ ರಾಗಿ ಹಾಕಿ ಬೆಳೆಸಿ (ಅದರ ಮಧ್ಯೆ ಗಣೇಶನಿಡಲು) ಅದರ ಸುತ್ತ ಮಂಟಪ ಕಟ್ಟಿ, ಮೈಕ್ ಹಾಕಿ ಬರೀ ಗಣೇಶನ ಹಾಡುಗಳನ್ನು ಹಾಕಿ ಎಲ್ಲವೂ ಸಿದ್ದವಾಗಿರುತ್ತಿತ್ತು. ಗಣೇಶನ ಹಾಡಿಗೂ ನಾವು ಕುಣಿಯುತ್ತಿದ್ದೆವು. ಇಂದಿಗೂ ಗಜಮುಖನೇ ಗಣಪತಿಯೇ ಹಾಡು ಕೇಳಿಸಿಕೊಂಡಾಗ ಕುಣಿದು ಬಿಡಲೆ ಅನಿಸುತ್ತದೆ. ಕಮ್ಮಾರ ಮನೆಯಿಂದ ಅಲ್ಲಿ ಬಂದು ಕೂತ ಮೇಲೆ ಶಾಲೆಗಳು ಕೊಟ್ಟ ರಜೆಯ ಪರಿಣಾಮವಾಗಿ ದಿನಂಪೂರ್ತಿ ನಮ್ಮದೇ ಅಲ್ಲಿ ಠಿಕಾಣಿ.
ಶಾಲೆಯಲ್ಲೂ ಗಣೇಶ ಕೂರುತ್ತಿದ್ದ. ನಾವು ಒಂದೆರಡು ಕ್ಲಾಸ್ನವರಾದ ಕಾರಣ ಅಣ್ಣಂದಿರು ( ಅರೇಳು ತರಗತಿಯವರು) ಅದರ ಉಸ್ತುವಾರಿ. ನಾವು ದೂರದಿಂದ ನೋಡಿ ಕೈ ಮುಗಿಯುವುದು. ಕೊಬ್ಬರಿ ಮಂಡಕ್ಕಿ ಮುಕ್ಕುವುದು, ಜೈ ಗಣೇಶ್ ಮಹಾರಾಜ್, ಗಣಪತಿ ಬಪ್ಪ ಮೋರಿಯಾ ಅಂತ ಕೂಗೋದು ಅಷ್ಟೇ ನಮ್ಮ ಕೆಲಸ. ನಮ್ಮ ಅಣ್ಣಂದಿರು ಮೇಷ್ಟ್ರಿಗಿಂತ ಶಿಸ್ತು, ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಶಾಲೆಯ ಗಣಪ ನಮಗೆ ಬಲು ದುಬಾರಿ.
ಮನೆಯಲ್ಲಿ ಕಡುಬು, ಉಂಡೆ,ಕರ್ಜಿಕಾಯಿ ಮಾಡಿದರೂ ನಮ್ಮ ಮನಸ್ಸು ಆ ಕಡೆ ಸೆಳೆಯುತ್ತಲೇ ಇರಲಿಲ್ಲ. ಅವ್ವನ ಸೆರಗುಹಿಡಿದು ತಿನ್ನಲು ಎಂಬಂತೆ ಅವುಗಳನ್ನು ಇಸಿದುಕೊಂಡು ಶಾಲೆಯ ಅಣ್ಣಂದಿರಿಗೆ ನೀಡಿ ಗಣೇಶನ ಮುಂದೆ ಕಟ್ಟಿಸುತ್ತಿದ್ದೆವು. ಊರ ಮುಂದಿನ ದೊಡ್ಡ ಗಣೇಶನ ಮುಂದೆ ಇಡಲು ಹೋದರೆ ಮಾತ್ರ ಅಲ್ಲಿ ದೊಡ್ಡವರ ಕಾಟ. ' ಏಯ್ ತಿಂದ ಎಂಜಲು ಇಡೋಕೆ ಬಂದೀರಾ!? ಹೋಗ್ರಲೇ!' ಅನ್ನೋರು. ನಮಗೆ ಅಲ್ಲೂ ಹಿನ್ನಡೆ. ಸಂಜೆ ಗಣೇಶನ ಮುಂದೆ ಹಾಡು ಹೇಳಿಸೋರು. ಮತ್ತೆ ಗಜಮುಖನೆ ಗಣಪತಿಯೆ ಹಾಡುತ್ತಿದ್ದೆವು. ನಮ್ಮ ಕಾಟ ತಡೆಯಲಾರದೆ ದೊಡ್ಡವರು ತಲೆ ಕೆರೆದುಕೊಳ್ಳುತ್ತಿದ್ದರು.
ಮೂರು ದಿನದ ನಂತರ ಗಣೇಶ ಊರ ಕೆರೆ ಸೇರಬೇಕು. ಅಂದು ಮೆರವಣಿಗೆ. ಮುಂದೆ ಕುಣಿಯುವುದು ನಮ್ಮ ಹಕ್ಕು. ಡೋಲು ತಮಟೆಗಳಿಗೆ ಮೈ ಬಿಚ್ಚಿ ಕುಣಿಯುತ್ತಿದ್ದೆವು;ದೊಡ್ಡವರ ಗದರಿಕೆಗೂ ಜಗ್ಗದೆ. ಗಣೇಶನ ಮುಳುಗಿಸಿದ ಮೇಲೆ ನಮಗೆ ತಿನ್ನಲು ಮಂಡಕ್ಕಿ, ಕೊಬ್ಬರಿ ಕೊಡೋರು. ತಿಂದು ಮನೆಕಡೆ ಹೋಗದೇ ಊರ ಮುಂದೆ ಸೇರಿ ಕೆರೆಯಲ್ಲಿ ಮಣ್ಣು ತಂದು ನಾಳೆಯಿಂದಲೇ ನಾವೇ ಗಣೇಶನ ಮಾಡಲು ತಯಾರಿ ನಡೆಸುತ್ತಿದ್ದೆವು. ಕಮ್ಮಾರ ಮನೆಯಲ್ಲಿ ತಿಂಗಳು ಗಟ್ಟಲೇ ನೋಡಿದ ಮೇಲೆ ನಮ್ಮ ಕೈ ಚಡಪಡಿಸುತ್ತಿದ್ದರಿಂದ ಅಂತೂ ಇಂತೂ ಮಣ್ಣನ ಗಣೇಶನ ಮಾಡಿ ಮನೆಯಿಂದ ಕುಂಕುಮ ತಂದು ಹಚ್ಚಿ ಪೂಜೆ ನೇಮಕ ಮಾಡಿ ಹುಡುಗರೇ ತುಂಬಿದ ಮೆರವಣಿಗೆಯಲ್ಲಿ ಮತ್ತದೇ ಕೆರೆಗೆ ತಂದು ನೀರಿಗೆ ಬಿಡುತ್ತಿದ್ದೆವು.
ಗಣೇಶ ಹಬ್ಬ ಮುಗಿದು ಎರಡು ಮೂರು ತಿಂಗಳು ಕಳೆದರೂ ಈ ಕ್ರಿಯೆ ಸಾಗುತ್ತಲೇ ಇರುತ್ತಿತ್ತು. ಪ್ರತಿವರ್ಷ ನಾನು ನನ್ನ ಬಾಲ್ಯಕ್ಕೆ ಮರಳಲು ಇರುವ ಒಂದು ಪ್ರಬಲ ಅಸ್ತ್ರ ಅಂದರೆ ಅದು ಗಣೇಶ. ಯಾರಿಗೆ ಗಣೇಶ ಹಬ್ಬ ಏನೇನೊ? ಎಂತೆಂತೊ? ಗೊತ್ತಿಲ್ಲ ಆದರೆ ನಮ್ಮೂರಿನ ನಮ್ಮ ಓರೆಗೆಯ ಎಲ್ಲಾ ಮಿತ್ರರಿಗೂ ಗಣೇಶ ಅಂದ್ರೆ ಬೇರೇನೂ ಅಲ್ಲ, ಅದು ನಮ್ಮ ಬಾಲ್ಯ ಮಾತ್ರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ