ಅಮ್ಮನ ಹೆಣದ ಪಕ್ಕ ಕೂತು ಬಾಳೆ ಹಣ್ಣು ತಿಂದಿದ್ದೆ!

ಹೊಸ್ತಿಲಾಚೆ ಬೆತ್ತಲೆ  07


ಹತ್ತು ವರ್ಷಗಳಿಂದ ಊಟ ತಿಂಡಿಗಳ ಕೈಂಕರ್ಯವನ್ನು ಹೋಟೆಲ್‍ಗಳಲ್ಲೇ ಮುಗಿಸುತ್ತಾ ಬಂದಿರುವ ನಾನು ಹೋಟೆಲ್‍ನಲ್ಲಿ ಕೆಲಸ ಮಾಡುವ ಅದೆಷ್ಟು ಹುಡುಗರನ್ನು ನೋಡಿದ್ದೀನಿ. ಅವರ ಬಾಳನ್ನು ಹತ್ತಿರದಿಂದ ಕಂಡಿದ್ದೀನಿ. ಮನೆ ಬಿಟ್ಟು ಬಂದವರು, ತಪ್ಪಿಸಿಕೊಂಡವರು, ಕೆಲಸಕ್ಕೆಂದೆ ಎಳೆಸಿಕೊಂಡು ಬಂದವರು, ಮನೆಯಲ್ಲಿ ಊಟಕ್ಕಿಲ್ಲದೆ  ಹಸಿವಿಗೆ ಅಂತ ಬಂದವರು, ಮನೆಯಿಂದ ಓಡಿಸಿಕೊಂಡವರು, ಯಾರೂ ಇಲ್ಲದ ಪರದೇಶಿಗಳಂತವರು ಇವರು. ಇವ್ರೆಲ್ಲಾ ನಾವು ತಿಂದ ಎಂಜಲು, ಊಟದ ತಟ್ಟೆ ಲೋಟ ತೊಳೆಯುತ್ತಾರೆ. ನೀರಾಕಿ ಕೈಯಿಂದ ನೆಲ ಉಜ್ಜುತ್ತಾರೆ. ಹೋಟೆಲ್ ಯಜಮಾನನ ಏಟಿಗೆ ಬೆನ್ನು ಕೊಡುತ್ತಾರೆ. ರಾತ್ರಿ ಮೂಲೆಯಲ್ಲಿ ಈರುಳ್ಳಿ ಚೀಲವನ್ನು ಹಾಸಿಕೊಂಡು ಸೊಳ್ಳೆಗಳೊಂದಿಗೆ ಜಗಳಕ್ಕಿಳಿಯುತ್ತಾ ಬೆಳಗ್ಗೆಯಿಂದ ತುಂಬಿಕೊಂಡ ಸುಸ್ತು ಹೊದ್ದುಕೊಂಡು ಮಲಗಿಬಿಡುತ್ತಾರೆ. ಗಿರಾಕಿಗಳ ಬೈಗುಳ, ಯಜಮಾನನ ಉಗಿತ, ಸಾರ್ವಜನಿಕರ ತಿರಸ್ಕಾರದ ನೋಟ ಅವರನ್ನು ಕನಸಲ್ಲೂ ಕಾಡುತ್ತವೆ.

 

ಆ ಹುಡುಗರ ಬಗ್ಗೆ ನಂಗೆ ಅದೇನೋ ಕೂತೂಹಲ. ಸಮಯ ಸಿಕ್ಕಾಗ ಅವರೊಂದಿಗೆ ಮಾತಾಗುತ್ತೇನೆ. ನಗಿಸುತ್ತೇನೆ. ಒಂಚೂರು ಕಷ್ಟ ಎಂದವರಿಗೆ ಸಮಾಧಾನವಾಗುತ್ತೇನೆ. ಹೀಗೆ ಮೊನ್ನೆ ಸಿಕ್ಕ ಒಬ್ಬ ಹುಡುನ ಮಾತುಗಳು ಅಕ್ಷರಶಃ ನನ್ನನ್ನು ಬಹು ಕಾಡಿದವು. ಬದುಕು ಹೀಗೂ ಕೂಡ ಇದ್ಯಾ ಅಂತ ನನ್ನನ್ನು ನಾನು ಕೇಳಿಕೊಂಡಿ ಮತ್ತೆ ಮತ್ತೆ! ಅವನ ಮಾತುಗಳು ಹೀಗಿದ್ದವು.
‘ಅವತ್ತು ನಂಗೆ ಅದೇನು ಅಂತ ಗೊತ್ತಾಗಿರಲಿಲ್ಲ, ನಮ್ಮಮ್ಮ ಸತ್ತಿದ್ದಾರೆ ಅಂತ ಹೇಳ್ತಿದ್ರು. ಸಾವು ಅಂದ್ರೆ ಏನು ಅಂತಾನೂ ಗೊತ್ತಿಲ್ಲ. ನಮ್ಮಮ್ಮ ಹಾಗೆ ಮಲಗಿದ್ರು. ಅವರ ಮೇಲೆ ಹೂವಿನ ಹಾರ ಹಾಕಿದ್ರು. ಪೂಜೆ ಮಾಡಿ ಅವರ ಪಕ್ಕ ಇಟ್ಟ ಬಾಳೆ ಹಣ್ಣ ತಗೆದುಕೊಂಡು ತಿಂದಿದ್ದೆ. ಎಲ್ಲರೂ ಅಳ್ತಿದ್ರು. ಇವರ್ಯಾಕೆ ಅಳ್ತಿದ್ದಾರೆ ಅಂತ ಯೋಚಿಸದೇ ನಾನು ಬಾಳೆ ಹಣ್ಣು ತಿಂತ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕುಣಿದಾಡುತ್ತಾ ಓಡಾಡ್ತಿದ್ದೆ. ರಾತ್ರಿಯೊತ್ತಿಗೆ ಬಂದ ನಮ್ಮ ಮಾಮ ನನ್ನ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ರು. ಚಿಕ್ಕಮ್ಮ ‘ಇನ್ಮೇಲೆ ನಿಂಗೆ ಅಮ್ಮ ಇಲ್ಲ’ ಅಂದಾಗ ಭಯವಾಗಿದ್ದು ಮೊದಲ ಬಾರಿ. ಮನೆಯಲ್ಲಿ ಜನ ತುಂಬಿತ್ತು. ಅಮ್ಮನ ಗೈರು ಅಷ್ಟೊಂದು ಕಾಡಿರಲಿಲ್ಲ. ನಿದ್ದೆಯಿಂದ ಸಡನ್ ಆಗಿ ಎದ್ದಾಗ ಅಮ್ಮ ಅಮ್ಮ ಅಂತ ಕನವರಿಸಿದ್ದಾಗ ನಮ್ಮ ಚಿಕ್ಕಮ್ಮ, ಮಾಮ ಯಾರೋ ಸಮಾಧಾನಿಸಿ ಮಲಗಿಸುತ್ತಿದ್ದರು. ನನ್ನಪ್ಪ ನನ್ನ ಸಮಾಧಾನಿಸಿದ್ದು ನನಗೆ ನೆನಪಿಗೇ ಬರುತ್ತಿಲ್ಲ. ಎಲ್ಲಾ ಮುಗಿದ ಹತ್ತಾರು ದಿನಕ್ಕೆ ಅಪ್ಪ ಮತ್ತೆ ಮದುವೆಯಾದರು. ‘ನೋಡು ಇವಳೇ ನಿನ್ನ ಅಮ್ಮ ಇನ್ಮೇಲೆ’ ಅಂತ ಅಪ್ಪ ಹೇಳಿದ್ದು ನೆನಪಿದೆ. ನನ್ನ ಕರುಣಾ ದಿನಗಳು ಅಂದೇ ಆರಂಭವಾಗಿದ್ದವು. ನಾನು ಆ ಮನೆಯಲ್ಲಿ ನಾಯಿಗಿಂತ ಕಡೆಯಾಗಿ ಹೋದೆ. ಏಟುಗಳು ಲೆಕ್ಕಕ್ಕೆ ಸಿಗಲಿಲ್ಲ. ತಪ್ಪು ತಪ್ಪುಗಳನ್ನೇ ಹೊರಿಸಿ ಹೊರಿಸಿ ನಾನು ಹುಟ್ಟಿರುವುದೇ ತಪ್ಪು ಅನ್ನುವಂತೆ ಮಾಡಿದರು. ಮಾಮನ ಮನೆಗೆ ಹೋಗಲೇ ಅಂದುಕೊಂಡೆ! ಅಲ್ಲಿ ಕೂಡ ನನ್ನ ಎರಡನೇ ಅಮ್ಮನಂತಹ ಅತ್ತೆಯೂ ಇರಬಹುದಲ್ವಾ? ಯಾರ ಹಂಗ್ಯೇಕೆ ಅಂದುಕೊಂಡೆ.


ಮನೆ ಬಿಟ್ಟೆ! ಈ ಮನೆಗಳೇ ಅನ್ನೋದು ಇರಬಾರದು. ಪ್ರಪಂಚ ಹೀಗೆ ಮನೆ ರಹಿತವಾಗಿರಬೇಕು, ಸ್ವತಂತ್ರವಾಗಿರಬೇಕು  ಅನಿಸುತ್ತೆ. ಎಲ್ಲಾ ಕಣ್ಣೀರು, ನೋವಿಗೆ ಈ ಮನೆಯ ಎಂಬುದೇ ಕಾರಣ. ಹೋಟೆಲ್ ಸೇರಿಕೊಂಡು ಹತ್ತಾರು ಹೋಟೆಲ್ ಬದಲಾಯಿಸಿದೆ. ಊಟ ಮತ್ತು ಮಲಗೋಕೆ ಜಾಗ ಸಿಗುತ್ತೆ ಅಂತ ಹೋಟೆಲ್ ಬಿಟ್ಟು ಬೇರೆ ಎಲ್ಲೂ ಕೆಲಸ ಹುಡುಕೋಕೆ ಹೋಗಿಲ್ಲ. ಹೋಟೆಲ್‍ಗೆ ಬರುವ ಮಂದಿನ ನೋಡಿ ನಾನು ತುಂಬಾ ನೊಂದು ಹೋಗ್ತಿನಿ. ತಂದೆ ತಾಯಿ ಅವರ ಮಕ್ಕಳು, ಬಂಧುಗಳು, ಆ ಮಕ್ಕಳ ಹಠ, ಅವರಿಗೆ ಬಲವಂತಮಾಡಿ ತಿನ್ನಿಸುವ ಅವರ ಅಮ್ಮ, ಆ ಪ್ರೀತಿ, ಅ ಸಂಬಂಧಗಳು ಅವರೆಲ್ಲ ಎಷ್ಟು ಅದೃಷ್ಟವಂತರು ಅನಿಸುತ್ತೆ. ನಮ್ಮಮ್ಮ ಇದ್ರೆ ನನ್ನನ್ನು ಹೀಗೆ ನೋಡಿಕೊಳ್ತಿದ್ರು. ನಮ್ಮಪ್ಪ ಹಾಗೆ ಯಾಕೆ ಆದ್ರು ಗೊತ್ತಿಲ್ಲ. ನಂಗೆ ಬದುಕಿನ ಮೇಲೆ ಭರವಸೆಗಳೇ ಇಲ್ಲ. ಹಸಿವಾದಾಗ ಊಟ, ಎಚ್ಚರವಾದಾಗ ಕೆಲಸ. ಸಾಕು ನನಗೆ ಇನ್ನೇನು ಬೇಕು? ನಾನು ಅವೆರಡನ್ನು ಬಿಟ್ಟು ಬೇರೆ ಯಾವುದಕ್ಕೂ ಅರ್ಹನಲ್ಲ ಎಂದು ದೇವರೇ ನಿರ್ಧರಿಸಿದಂತಿದೆ...’ ಅಂತ ಆ ಹುಡುಗ ಅಂದಾಗ ನಾನು ತಾನೇ ಏನ್ ಉತ್ತರಿಸಲಿ, ಸುಮ್ಮನೆ ನೆಲ ನೋಡುತ್ತಿದ್ದೆ! ಬದುಕು ಹೀಗೂ ಕೂಡ ಇರುತ್ತೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!