ಹೊಸ್ತಿಲಾಚೆ ಬೆತ್ತಲೆ 06

ಅವರನ್ನು ಹೊರಹಾಕಬೇಡ ಮಗಳೇ!

ಮಗಳೇ,

    ಈ ನಾಡಿನ ಪ್ರತಿಯೊಬ್ಬ ತಾಯಿಯರ ಪರವಾಗಿ ನಿನಗೊಂದು ಪತ್ರ ಬರೆಯುತ್ತಿದ್ದೇನೆ. ಮಗಳಾಗಿ ತಾಯಿಯಾಗಿ ಅಜ್ಜಿಯಾಗಿ ಈಗ ಈ ಅನಾಥಾಶ್ರಮದ ಬಂಧುವಾಗಿ ಉಳಿದುಕೊಂಡಿದ್ದೇನೆ. ಜೀವ ಉಳಿಸಿಕೊಂಡಿದ್ದೇನೆ. ಉಳಿಯಲೇ ಬೇಕಲ್ಲ ಮಗಳೇ!? ನೀ ಬಂದು ಮೊಮ್ಮಕ್ಕಳನ್ನು ಕರೆತಂದು‌ ಕಣ್ಣೀರು ಸುರಿಸುತ್ತೀಯಾ ನನ್ನ ಸ್ಥಿತಿಗೆ. ಅಣ್ಣನಿಗೆ ಹಿಡಿ ಶಾಪ ಹಾಕುತ್ತೀಯ. ಆದರೆ ಅದು ತರವಲ್ಲ ಮಗಳೇ ಇನ್ನೊಬ್ಬರಿಗೆ ಕೆಟ್ಟದ್ದು ಬಯಸಲು ನಾವ್ಯಾರು ಅಲ್ಲವೇ!? ಅವನು ನನ್ನ ಮಗ. ಅದೆಷ್ಟೋ ಹರಕೆಗಳ ಫಲ ಅವನು. ಅವನು ಚನ್ನಾಗಿರಬೇಕು, ಖುಷಿಯಾಗಿರಬೇಕು ಅಂತ ತಾನೇ ನಾನು ಮತ್ತು ನಿಮ್ಮ ಅಪ್ಪ ಹಗಲು ರಾತ್ರಿ‌ ದುಡಿದಿದ್ದು. ಬರೀ ಇಂಗ್ಲೀಷ್ ಲ್ಲೇ ಮುಳುಗಿಸಿದ್ದು, ದೊಡ್ಡ ದೊಡ್ಡ ಕಾಲೇಜಿನಲ್ಲಿ ಓದಿಸಿದ್ದು, ದೊಡ್ಡ ನೌಕರಿ ಹಿಡಿಯುವಂತೆ ಮಾಡಿದ್ದು. ಅವನನ್ನು ದುಡಿಯುವ, ಹಣ ಮಾಡುವ ಯಂತ್ರವಾಗಿ‌ ಮಾಡಿದ್ದು ನಾವೇ ಅಲ್ಲವೇ!? ಇಂದು ಅವನನ್ನು‌ ದೂರಿದರೆ ಫಲವೇನು!? ಮಗನನ್ನು ಬರೀ ಮಗನಂತೆ ಸಾಕಲೇ‌ ಇಲ್ಲ ಅನಿಸುತ್ತಿದೆ ಅದಕ್ಕೆಂದೇ ಅವನು ತಂದೆ ತಾಯಿಯರನ್ನು ತಂದೆ ತಾಯಿಯರಂತೆ ನೋಡಿಕೊಳ್ಳುತ್ತಿಲ್ಲವಾ!? ಗೊತ್ತಿಲ್ಲ. ಅಷ್ಟಕ್ಕೂ‌ ಗರಿಯೊಡೆದ ಪಕ್ಷಿಗೆ ಗೂಡಿನ ಹಂಗೇಕೆ ಅಲ್ಲವೇ!?




 ಒಂದು ನೆನಪಿಡು ಮಗಳೇ ನಿನ್ನ ಮಕ್ಕಳನ್ನು ಕೇವಲ ಮಕ್ಕಳಂತೆ ಸಾಕು. ಅವರನ್ನು ಬೆಳೆಸುವ ಭರದಲ್ಲಿ‌ ನೀನು ನಿನ್ನ ಗಂಡ ಕಳೆದುಹೋಗಬೇಡಿ. 
ಇನ್ನೊಂದು ಮುಖ್ಯ ವಿಷಯ ಹೇಳಲೇಬೇಕು ಮಗಳೇ! ಈ ನಾಡಿನ‌ ಪ್ರತಿಮನೆಗಳಿಗೂ ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ, ನಾದಿನಿಯಾಗಿ ಇತ್ಯಾದಿ ಪಾತ್ರಗಳನ್ನು ಹೊತ್ತು ಬರುವವಳು ನನ್ನಂಥ ಮತ್ತು ನಿನ್ನಂಥ ಹೆಣ್ಣು ಜೀವಗಳೇ. ಹೆಣ್ಣೇ ಮನೆಯ ಪ್ರಮುಖ ಆಧಾರ. ಅವಳು ಮನಸ್ಸು ಮಾಡಿದರೆ ಆ ಮನೆ ನಂದನವನ‌ ಆಗಬಹುದು ಹಾಗೆಯೇ ಸ್ಮಶಾನವೂ ಆಗಬಹುದು. ನನ್ನ ಮಗನಿಗೆ ಸೊಸೆ ಬಂದಂತೆ ನೀನು ಬೇರೆಯವರ ಮನೆಗೆ ಸೊಸೆಯಾಗಿ ಹೋಗಿದೀಯಾ! ನೀನು ನಿನ್ನ ಅಣ್ಣನ ಬದಲಿಗೆ ನಿನ್ನ  ಅತ್ತಿಗೆಯ ಕಡೆ ಬೊಟ್ಟು ತೋರಿಸಲು ಕಾರಣವಾದರೂ ಏನಿರಬಹುದು!? ಹೇಳು. 

ನಾನು ಮನೆ ಬಿಟ್ಟು ಅನಾಥಾಶ್ರಮಕ್ಕೆ ಬರಲು  ಕಾರಣವಾದರೂ ಏನಿರಬಹುದು!? ಮಗನಾ ಸೊಸೆಯಾ ಯಾರು ಅಂತ ಹೇಳಲಿ!? ಇಬ್ಬರೂ ಇರಬಹುದು ಅಥವಾ ಇಬ್ಬರೂ ಅಲ್ಲದ ಅವರು ಬದುಕುತ್ತಿರುವ ವಾತಾವರಣವೂ ಇರಬಹುದು. ಅಂತಹ ಸಂದರ್ಭ ನಿನಗೂ ಬರಬಹುದು, ಬಂದೇ ಬರುತ್ತದೆ. ಆಗ ನೀನು ಎಲ್ಲ ಮನೆಯವರ ಹೆಣ್ಣು ಮಕ್ಕಳಂತೆ ನಡೆದುಕೊಳ್ಳುತ್ತೀಯ ಅನುಮಾನವೇ ಇಲ್ಲ. ಯಾಕೆಂದರೆ ನಾನೂ ಕೂಡ ಆ ಹಂತವನ್ನು ದಾಟಿ ಬಂದವಳು. ಅತ್ತೆಯಿಂದ ಸೊಸೆ.‌ ಮತ್ತೆ ಸೊಸೆ ಅತ್ತೆಯಾದಾಗ ಅವಳಿಂದ ಸೊಸೆಗೆ ಇದು ಮುಂದುವರೆಯುವುದು ಎಷ್ಟರಮಟ್ಟಿಗೆ ಸರಿ‌ ಅಲ್ಲವೇ‌ ಮಗಳೇ! 
ನನ್ನನ್ನು ತುಂಬಾ ಪ್ರೀತಿಯಿಂದ ಅಮ್ಮನ  ಅಕ್ಕರೆಯಿಂದ ನೋಡಿಕೊಂಡಂತೆ ಅಲ್ಲಿ ನಿಮ್ಮನೆಯಲ್ಲಿರುವ ನಿಮ್ಮ ಅತ್ತೆಯೂ ಕೂಡ ನಿನ್ನ ತಾಯಿ. ಹಾಗೆ ಭಾವಿಸಿಕೊಂಡಂತೆ ಅಲ್ಲ ತಾಯಿಯಂತೆಯೇ ಕಾಣಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವೇ ಆಗಬೇಕಾಗಿದೆ ಮಗಳೇ. ಯಾರೂ ಏನೇ ಭಾಷಣ ಮಾಡಿದರೂ, ದೊಡ್ಡ ದೊಡ್ಡ ಜಾಗೃತ ಶಿಬಿರಗಳು ನಡೆದರೂ ಬದಲಾವಣೆ ಪ್ರತಿಯೊಬ್ಬ ಮಗ ಮತ್ತು ಮಗಳಿಂದ ಆರಂಭವಾಗಬೇಕು‌ ಅಲ್ಲವೇ ಮಗಳೇ!? ನಿನಗೆ ಎರಡು ಜವಾವ್ದಾರಿಗಳಿವೆ ನಿನ್ನ ಅತ್ತೆ ಮಾವರನ್ನು ತಂದೆ ತಾಯಿಯಂತೆ ನೋಡಿಕೊಳ್ಳುವುದು. ನಿನ್ನ ಮಕ್ಕಳನ್ನು ಮಕ್ಕಳಂತೆ ಬೆಳೆಸುವುದು ಯಂತ್ರಗಳಂತೆ ಅಲ್ಲ. ನಿನ್ನ ತಾಯಿಯಾಗಿ ನಿನಗೆ ನಾ ನೀಡುವ ಚಿಕ್ಕ ಸಲಹೆ‌ ಇದೊಂದೇ. ತಪ್ಪಿದ್ದರೆ ಕ್ಷಮಿಸು ಬಿಡು ಮಗಳೇ! ನಮ್ಮ ದಿನಗಳು ಮುಗಿದವು. ಮುಂದಿನ ದಿನಗಳಾದರೂ ಚನ್ನಾಗಿರಲಿ ಎಂಬ ಆಶಾಭಾವದಿಂದಷ್ಟೇ ಈ ಪ್ರಯತ್ನ. 

                                                                                                              ನಿನ್ನ ತಾಯಿ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!