ಮಗನ ನೋಟ ‘ಯಾಕೆ ಬಂದೆ?’ ಅನ್ನುವ ಹಾಗಿತ್ತು!

ಹೊಸ್ತಿಲಾಚೆ ಬೆತ್ತಲೆ - 11



ನಾನು ಈ ನಡುವೆ ದಿನಾ ರಾತ್ರಿ ಒಂದು ಬಾಳೆ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇನೆ. ‘ಗುಡ್ ಒಳ್ಳೆ ಅಭ್ಯಾಸ ಕಣಯ್ಯಾ!’ ಅಂದ್ಕೊಂಡ್ರಾ? ಇಲ್ಲ ಖಂಡಿತ ಇಲ್ಲ. ‘ನೋಡಿ ಇವ್ರೆ ನಿಮಗೆ ಸ್ವಲ್ಪ ಜೀರ್ಣಶಕ್ತಿಯ ಸಮಸ್ಯೆ ಇದೆ. ಡೈಲಿ ರಾತ್ರಿ ಒಂದು ಬಾಳೆ ಹಣ್ಣು ತಿನ್ನಿ’ ಅಂತ ಯಾರೊ ಡಾಕ್ಟರ್ ಹೇಳಿರಬೇಕು ಅಂದ್ಕೊಂಡ್ರಾ? ಇಲ್ಲ ಅದು ಕೂಡ ಅಲ್ಲ.

ಬಾಳೆ ಹಣ್ಣು ತಿನ್ನಲೇ ಬೇಕು ಅನ್ನೋದು ನನ್ನ ಉದ್ದೇಶವಲ್ಲ. ಎಲ್ಲಾದರೂ ಪರವಾಗಿಲ್ಲ ಅಂಗಡಿಗಳು ಸಿಕ್ಕಾಗಲೆಲ್ಲಾ ತಿಂದುಬಿಡ್ತಿನಿ ಅಂತಾನೂ ಅಲ್ಲ. ನಿತ್ಯ ಆ ಅಂಗಡಿಯಲ್ಲಿಯೇ ಬಾಳೆ ಹಣ್ಣು ತಿನ್ನಬೇಕು ಅಂದ್ಕೊಂಡಿದೀನಿ ಆ ಅಂಂಗಡಿಯಲ್ಲಿಯೇ! ನನ್ನಿಂದ ಐದು ರೂಪಾಯಿ ವ್ಯಾಪಾರ ಆಗುತ್ತಲ್ಲ ಆ ಕಾರಣಕ್ಕೆ!


ಅಂಗಡಿ!? ಛೇ ಹಾಗೆ ಕರೆದರೆ ಪ್ರಮಾದವಾದೀತು! ಒಂದೊಂದು ಗಾಲಿಯಲ್ಲಿ ಏಳೇಟು ಕಡ್ಡಿಗಳು. ಹಾಗೆ ಕಡ್ಡಿಗಳಿರುವ ನಾಲ್ಕು ಗಾಲಿಗಳು. ಗಾಲಿಯಲ್ಲಿ ಟೈರ್ ಇದಾವೋ ಇಲ್ಲವೋ ನಾನು ನಿಖರವಾಗಿ ಹೇಳಲಾರೆ. ದಪ್ಪದಪ್ಪನೆಯ ಏಳೆಂಟು ಕಲ್ಲುಗಳನ್ನು ತಂದು ಅದಕ್ಕೆ ಒಡ್ಡಿ ನಿಲ್ಲಿಸಲಾಗಿದೆ. ತಳ್ಳು ಗಾಡಿ ರೀ! ಆದರೆ ತಳ್ಳಲು ಬಾರದು. ಅದಕ್ಕೆಂದೆ ಫುಟ್‍ಪಾತ್ ಮೇಲೆ ಒಂದೆಡೆ ಕಲ್ಲುಗಳನ್ನು ಆನಿಸಿ ನಿಲ್ಲಿಸಲಾಗಿದೆ. ಅದರ ಮೇಲೆ ಚಿಕ್ಕ ಗುಡಿಸಲಿನಂತೆ ಹರಕು ಮುರಕು ತಗಡು, ಪ್ಲೇವುಡ್‍ಗಳಿಂದ ಅಕ್ಕ ಪಕ್ಕ ಮತ್ತು ಮೇಲಿನ ಹೊದಿಕೆ. ಒಳಗೆ ಪೆಪ್ಪರಮೆಂಟು, ಬೋಟಿ, ಚಾಕಲೇಟ್, ಅಡಿಕೆ ಪಟ್ಣ, ಸಿಗರೇಟ್, ಬೀಡಿ, ಎಲೆ ಅಡಿಕೆ, ಒಂದು ಬಾಳೆಗೊನೆ ಇವಿಷ್ಟೇ! ಅಷ್ಟು ಅಂದ್ರೆ ಅಷ್ಟೇ ಅದಕ್ಕಿಂತ ಹೆಚ್ಚಿಲ್ಲ.

ನಾ ನಿತ್ಯ ಓಡಾಡುವ ಬದಿಯಲ್ಲಿ ಆ ಅಂಗಡಿ. ಅದರಲ್ಲೊಬ್ಬ ಮದುಕು. ಹತ್ತಿ ಅಂಗಡಿ ಮೇಲೆ ಕೂರಲು ಎಷ್ಟು ಕಷ್ಟಪಡಬೇಕೊ ಇಳಿಯಲು ಅದಕ್ಕಿಂತ ಹೆಚ್ಚು ಕಷ್ಟಪಡಬೇಕು. ಅವನು ಹಾಕಿರುವ ಸುಮಾರು ಐನೂರು ರೂಪಾಯಿಗೆ ಎಷ್ಟು ವ್ಯಾಪಾರ ಆಗ್ಬೇಕು ನೀವೆ ಹೇಳಿ. ಪಾಪ ಬೆಳಗ್ಗೆಯಿಂದ ಸಂಜೆಯವರೆಗೂ ತಳ್ಳುಗಾಡಿ ಮೇಲೆ ಗೂಡಿನಲ್ಲಿ ಆಮೆಯಂತೆ ಕಾಲೆಳೆದುಕೊಂಡು ಕೂರುತ್ತಾನೆ.


ಹಸಿವೊ, ಮತ್ತೊಂದೋ ಗೊತ್ತಿಲ್ಲ. ಒಮ್ಮೆ ಅಲ್ಲೇ ಓಡಾಡುತ್ತಿದ್ದ ನನಗೆ ಬಾಳೆ ಹಣ್ಣು ತಿನ್ನುವ ಆಸೆಯಾಯ್ತು. ‘ಅಜ್ಜ, ಒಂದು ಹಣ್ಣು ಕೊಡಿ’ ಅಂದು ಕೊಟ್ಟ ಹಣ್ಣು ತಿನ್ನುತ್ತಾ ಅಲ್ಲೇ ನಿಂತಿದ್ದೆ. ಅಲ್ಲಿಗೆ ಒಬ್ಬ ಹುಡುಗ ಬಂದ. ಕಾಲೇಜು ಓದುವವ ಅನಿಸುತ್ತೆ. ‘ರೀ ಒಂದು ಸಿಗರೇಟ್ ಕೊಡಿ’ ಅಂದ. ಮಾತಲ್ಲಿ ದರ್ಪ ಇತ್ತು. ಅಜ್ಜ ಕೋಪಿಸಿಕೊಂಡಂತೆ ಕಾಣುತ್ತೆ. ‘ಏಯ್ ಚೋಟುದ್ದಾ ಇದ್ದಿ, ಸಿಗರೇಟ್ ಬೇಕೆನೊ ನಿಂಗೆ? ಹೋಗು ಹೋಗು ಕೊಡಲ್ಲ’ ಅಂದಿತ್ತು ಅಜ್ಜ. ಹುಡುಗ ಅಜ್ಜನಿಗೆ ಬೈದು ಕೊಳ್ಳುತ್ತಲೇ ಹೋದ. ‘ಅಜ್ಜ, ಸಿಗರೇಟು ವ್ಯಾಪಾರಕ್ಕೆ ತಾನೇ ಇರೋದು ಯಾಕೆ ಕೊಡ್ಲಿಲ್ಲ?’ ಅಂತ ಕೇಳಿದೆ. ‘ಇಷ್ಟು ಚಿಕ್ ಚಿಕ್ ಹುಡುಗ್ರು ಸಿಗರೇಟು ಸೇದೋಕೆ ಸ್ಟಾರ್ಟ್ ಮಾಡಿದ್ರೆ ಹೇಗಪ್ಪ ಇವ್ರು? ಒಳ್ಳೆದಲ್ಲ. ಭವಿಷ್ಯ ಇದೆ ಅವಕ್ಕೆ!’ ಅಂದ್ರು. ‘ಅಜ್ಜ ನೀವು ವ್ಯಾಪಾರಕ್ಕೆ ಕೂತಿರೋದು, ವ್ಯಾಪಾರ ಆಗ್ಬೇಕು’ ಅಂದೆ. ‘ವ್ಯಾಪಾರ ಅಂದ್ರೆ ನಾಲ್ಕು ಜನನ ಹಾಳು ಮಾಡೋದಲ್ಲಪ್ಪ. ಅವರಿಗೂ ಒಳ್ಳೆದಾಗಿ ನಮಗೂ ಒಳ್ಳೆದಾಗಬೇಕು. ಈ ಸಿಗರೇಟು ಕೆಲವರು ದೊಡ್ಡೋರು ಕೇಳ್ತಾರೆ ಅಂತ ಇಟ್ಟಿದೀನಿ ಅಷ್ಟೇ’ ಅಂದಿತು ಮುದಿ ಜೀವ.
ವಾವ್! ಅನಿಸಿದರು ಅಜ್ಜ. ‘ಯಾಕಜ್ಜ, ಈ ಇಳಿವಯಸ್ಸಿನಲ್ಲಿ ಅರಾಮಾಗಿರೋದು ಬಿಟ್ಟು ಇದೆಲ್ಲಾ ಯಾಕೆ ನಿಮಗೆ?’ ಅಂದೆ. ‘ಹೊಟ್ಟೆ ಪಾಡು ಮಗಾ! ಹೆಂಡತಿ ಸತ್ತ ಮೇಲೆ ಒಬ್ನೆ ಒಬ್ಬ ಮಗ ಅಂತ ಮುದ್ದು ಮಾಡಿ ಸಾಕಿದೆ. ಬೆಂಗಳೂರಿಗೆ ಕೆಲಸಕ್ಕೆ ಅಂತ ಹೋದೋನು ಈ ಕಡೆ ತಲೆ ಹಾಕಿಲ್ಲ. ಸುಳಿವು ಹಿಡಿದು ನಾನೇ ಒಂದೆರಡು ಬಾರಿ ಹೋದೆ. ಅವನ ನೋಟ ಯಾಕೆ ಬಂದೆ ಅನ್ನುವ ಹಾಗೆ ಇತ್ತು. ಅವನ ಹೆಂಡತಿ, ಮಕ್ಕಳು, ಆ ಸಂಸಾರ ಅವರ ಮಧ್ಯೆ ನಾನಿರುವುದು ಬೇಡವೆನಿಸಿತು. ಬಂದು ಈ ಚಿಕ್ಕ ಅಂಗಡಿ ಮಾಡಿ ಬದುಕ್ತಿದೀನಿ. ಬೇಡಿ ತಿನ್ನುವುದಕ್ಕಿಂತ ದುಡಿದು ತಿನ್ನುವುದು ಖುಷಿ ಮಗಾ. ದಿನಕ್ಕೆ ಹತ್ತಿಪ್ಪತ್ತು ರೂಪಾಯಿ ಸಿಕ್ಕರೆ ಸಾಕು. ಅಂದಿತ್ತು ಆ ಸೋತ ಜೀವ. ನಾನು ಕಣ್ಣು ತುಂಬಿ ಕೊಂಡೆ. ದುಡ್ಡುಕೊಟ್ಟು ಆಚೆ ಬಂದೆ. ನಿತ್ಯ ಆ ಅಂಗಡಿ ಹೋಗಿ ಐದು ರೂಪಾಯಿ ಕೊಟ್ಟು ಬಾಳೆ ಹಣ್ಣು ತಿಂತೀನಿ. ದುಡಿದು ಬದುಕಬೇಕು ಅನ್ನುವ ಅಜ್ಜನಿಗೆ ನಾನು ಇಷ್ಟು ಕೂಡ ಮಾಡದೇ ಇರಲಾಗಲಿಲ್ಲ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!