ಎಲ್ರಿಗೂ ಇರುವ ಅಪ್ಪ ನಂಗ್ಯಾಕಿಲ್ಲ!?

  ಹೊಸ್ತಿಲಾಚೆ ಬೆತ್ತಲೆ - 09


ಹೌದು, ಎಲ್ಲರಿಗೂ ಇರುವ ಅಪ್ಪ ನನಗೆ ಯಾಕಿಲ್ಲ!? ಮುದ್ದು ಹುಡುಗನ ಮನಸ್ಸಿನಲ್ಲಿ ಮುದ್ದು ಪ್ರಶ್ನೆ ಮೂಡಿತ್ತು. ತರಗತಿಯ ಪಾಠಗಳು, ಜೊತೆಗಿನವರ ಮಾತುಗಳು, ಅಲ್ಲಲ್ಲಿ ನೋಡುತ್ತಿದ್ದ ನೋಟಗಳು ‘ಅಪ್ಪ’ ಎನ್ನುವ ಒಂದು ಪಾತ್ರ ತನ್ನ ಜೀವನದಲ್ಲಿ ಏಕಿಲ್ಲ ಅನಿಸುವಂತೆ ಮಾಡಿತ್ತು. ಅದೇ ಮುಗ್ಧತೆಯಲ್ಲಿ ಬಂದು ಅಮ್ಮನನ್ನು ಕೇಳಿದ್ದ. ‘ಅಮ್ಮಾ, ಅಪ್ಪ ಎಲ್ಲಿ?’ ಏನು ಉತ್ತರ ಕೊಟ್ಟಾಳು!. ಉತ್ತರವೇ ಇಲ್ಲ ಅಂತಲ್ಲ. ಇಷ್ಟು ಬೇಗ ತನಗೆ ತಂದೆಯೇ ಇಲ್ಲ ಎಂಬ ಅರಿವು ಮಗನಿಗೆ ಏಕೆ ಎಂದು ಅದನ್ನು ಹಾಗೆ ಹಿಡಿದಿಟ್ಟಿದ್ದಳು.


ತಾನು ಆರು ತಿಂಗಳು ಗರ್ಭಿಣಿಯಾಗಿದ್ದಾಗ ಗಂಡನಿಗೆ ಜ್ವರ ಬಂದಿದ್ದೆ ನೆಪವಾಗಿ ಹತ್ತು ಹದಿನೈದು ದಿನಗಳ ಸರ್ಕಾರಿ ಆಸ್ಪತ್ರೆಯ ವಾಸದಲ್ಲಿ ಒಂದು ದಿನ ಇದ್ದಕ್ಕಿಂದ ಹಾಗೆ ಸತ್ತು ಹೋಗಿದ್ದ. ಹೊಟ್ಟೆಯೊಳಗಿನ ಮಗು ಅನಾಥವಾಗಿತ್ತು. ತವರು ಸೇರಿ ಹಡೆದು, ಮಗುವನ್ನು ಜತನ ಮಾಡಿಕೊಂಡು ಬದುಕಿದ್ದಳು. ಅತ್ತಿಗೆಯ ಮಾತುಗಳಿಂದ ಅಲ್ಲಿಂದ ಹೊರ ಬಂದು ಸ್ವಂತಕ್ಕೆ ಬದುಕಿದ್ದಳು. ಗಂಡನ ಮನೆಯಿಂದಲೂ ಆಸ್ತಿಯ ಕಾರಣಕ್ಕೆ ತಳ್ಳÀಲ್ಪಟ್ಟಿದ್ದಳು. ಯೌವ್ವನ ಇನ್ನೂ ಹಸುರಾಗಿರುವ ಕಾರಣ ತಿನ್ನುವ ಕಣ್ಣುಗಳಿಂದ ಪಾರಾಗುವುದೇ ಸವಾಲಾಗಿತ್ತು. ಹೇಗೋ ಮಗುವನ್ನು ಚನ್ನಾಗಿ ಸಾಕುವ ಹಠಕ್ಕೆ ಬಿದ್ದು ಬದುಕಿದ್ದಳು. ಮಗು ಆಗ ತಾನೇ ಒಂದನೇ ಕ್ಲಾಸಿಗೆ ಸೇರಿತ್ತು.


ಮಗ ಬಂದು ‘ಅಪ್ಪ ಎಲ್ಲಮ್ಮಾ?’ ಅಂತ ಕೇಳಿದಾಗ ಉತ್ತರ ಹೇಳಬೇಕಿತ್ತು. ಆದರೆ ನಿನಗೆ ತಂದೆಯಿಲ್ಲ ಸತ್ತು ಹೋಗಿದ್ದಾರೆ, ತಾಯಿಯೊಬ್ಬಳೇ ಎನ್ನುವುದನ್ನು ಹೇಳುವುದು ಆಕೆಗೆ ಇಷ್ಟವಿಲ್ಲ. ತಾನು ತಂದೆಯಿಲ್ಲದ ಮಗು ಎಂಬ ಭಾವನೆ ಇಷ್ಟ ಬೇಗನೇ ಬಂದು ಬಿಡಬಾರದು. ತಂದೆ ಇಲ್ಲದಿರುವಿಕೆ ಎಂದೂ ಬಾಧಿಸಬಾರದೆಂದು ಅಂದುಕೊಂಡಿದ್ದಳು. ತಾನು ತಂದೆಯಿಲ್ಲದ ಮಗ ಎಂಬ ಭಾವನೆಯೇ ಬರದ ಹಾಗೆ ನೋಡಿಕೊಳ್ಳಬೇಕೆಂದಿದ್ದಳು. ಆದರೆ ಆ ಮಗುವನ್ನು ಸಮಾಜ ಕಾಡಿತ್ತು.
‘ಮಗು ನಿಮ್ಮಪ್ಪ ಇದಾರೆ ಕಣೋ! ಅಲ್ಲಿ ದೂರದಲ್ಲಿ ಬೆಂಗಳೂರು ಅಂತ ಇದೆಯಲ್ವಾ, ಅಲ್ಲಿದ್ದಾರೆ. ನಿನಗೆ ನನಗೆ ಏನೇನು ಬೇಕು ಅದ್ನ ತಗೊಳೊಕೆ ದುಡ್ಡು ಬೇಕಲ್ವ ಅದಕ್ಕೆ ಅಲ್ಲಿ ಕೆಲಸಕ್ಕೆ ಇದಾರಪ್ಪ!’ ಅಂದಳು.
‘ಹೌದಾ, ಮತ್ತೆ ಯಾಕೆ ಒಂದ್ಸರಿನೂ ಬಂದಿಲ್ಲ!? ಅನ್ನಬೇಕೆ ಮಗು. ‘ಬಂದಿದ್ರು ಕಣೋ ನೀ ಅಜ್ಜಿ ಮನೆಗೆ ಹೋಗಿದ್ಯಲ್ಲ ಆಗ’ ಎಂದು ಎಂದು ಅಳುತ್ತಿದ್ದ ಮನಸ್ಸಿನಲ್ಲೇ ಉತ್ತರಿಸಿದ್ದಳು. ‘ಹೌದಾ? ಬೆಂಗಳೂರು ಎಲ್ಲಿದೆ? ತುಂಬಾ ದೂರನಾ?’ ಅಂದಿತು ಮಗು. ‘ಹೂಂ ಕಂದ ತುಂಬಾ ದೂರ..’ ಎನ್ನುತ್ತಾ ಮಗುವನ್ನು ಎತ್ತಿಕೊಂಡು ಆಚೆ ಬಂದು ಮನೆಯಿಂದ ದೂರದಲ್ಲಿ ಹೋಗುತ್ತಿದ್ದ ರೈಲ್ ನ್ನು ತೋರಿಸಿ ‘ನೋಡು ಈ ರೈಲು ಹೋಗುತ್ತಲ್ಲ ಆ ಊರು’ ಅಂದಳು. ಮಗುವಿನ ಕಣ್ಣು ಅರಳಿದ್ದು ಅವಳ ಅರಿವಿಗೆ ಬರಲಿಲ್ಲ. ಪ್ರಶ್ನೆಗಳೂ ನಿಂತವು, ಉತ್ತರಗಳೂ ನಿಂತವು.


ಮಗುವಿನ ಮನಸ್ಸಿನಲ್ಲಿ ಅಪ್ಪನನ್ನು ಕಾಣುವ ಯೋಚನೆ ಸಿದ್ದವಾಗ ತೊಡಗಿತು. ಬೆಂಗಳೂರಿಗೆ ಹೋದ್ರೆ ಅಪ್ಪ ಸಿಗ್ತಾರೆ. ಯಾಕೆ ಹೋಗಬಾರದು ಎಂಬ ಯೋಚನೆಗೆ ಗರಿ ಮೂಡಿತು. ಅದೇ ಯೋಚನೆಯಲ್ಲಿ ಮಲಗಿ, ಬೆಳಕು ಹರಿಸಿದ.
ಎಂದಿನಂತೆ ಶಾಲೆಗೆ ಹೊರಟ. ಶಾಲೆಗೆ ಹೋಗದೇ ರೈಲ್ವೇ ನಿಲ್ದಾಣ ಸೇರಿದ. ಅಮ್ಮ ತೋರಿಸಿದ ದಿಕ್ಕಿಗೆ ಹೋಗುವ ರೈಲು ಬರುವುದನ್ನು ಕಾದ. ಸ್ವಲ್ಪ ಹೊತ್ತಿನಲ್ಲಿಯೇ ಬಂದ ಬೆಂಗಳೂರು ಕಡೆ ಹೋಗುವ ರೈಲಿಗೆ ಹತ್ತಿಯೇ ಬಿಟ್ಟ ಅಪ್ಪನ ನೋಡುವ ಆಸೆಯನ್ನು ಕಣ್ಣಿನಲ್ಲಿ ತುಂಬಿಕೊಂಡು. ರೈಲು ಹೊರಟಿತು.
ಇತ್ತ ತಾಯಿಯ ಹೊಟ್ಟೆಯಲ್ಲಿ ಅದೇನೊ ಸಂಕಟವಾದಂತಾಗಿ ಕೆಲಸ ಮಾಡಲಾಗದೇ ಕೂಲಿಯನ್ನು ಮಧ್ಯಕ್ಕೆ ನಿಲ್ಲಿಸಿ ಎದ್ದು ಬಂದು ಮನೆ ಸೇರಿದಳು. ಶಾಲೆಯಿಂದ ಬರುವ ಮಗನನ್ನು ಕಾಯುತ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!