ನಮ್ಮ ಮನೆಯಲ್ಲಿ ಯಾರೋ ಹಸಿದಿದ್ದಾರೇನೊ ಅನ್ಸುತ್ತೆ ಸರ್!


ಹೊಸ್ತಿಲಾಚೆ ಬೆತ್ತಲೆ - 10



ಆಕೆಯ ಹೆಸರು ಭಾರ್ಗವಿ. ಪೇಸ್ಬುಕ್ ಲ್ಲಿ ಯಾವಾಗ ಪ್ರೆಂಡ್ ಆಗಿ ಬಿಟ್ಟಿದ್ದಳೊ ಗೊತ್ತಿಲ್ಲ! ಆದರೆ ಇಲ್ಲಿ  ವಿಷಯವೆಂದರೆ ಅವಳ ಪೋಸ್ಟಿಂಗ್ ಕುರಿತಾದದ್ದು. ಸಾಮಾನ್ಯವಾಗಿ ನಮಗೆಲ್ಲ ಒಂದು ಕ್ರೇಜ್ ಇರುತ್ತೆ. ನಮ್ಮ ಮನೆಯಲ್ಲಿ ಪ್ರೀತಿಯ ಬೆಕ್ಕು ಅಥವಾ ಚಂದದ ನಾಯಿ ಇನ್ಯಾವುದೋ ಪ್ರೀತಿಯಿಂದ ಸಾಕಿದ ಪ್ರಾಣಿಯ ಜೊತೆ ಸೆಲ್ಪಿಯೋ, ಅದರೊಂದಿಗಿನ ಒಡನಾಟದ ಫುಲ್  ಪೊಟ್ರೆಟ್ ಸೈಜಿನ ಪೋಟೊ ವನ್ನು ನಮಗೆ ಪ್ರಾಣಿಗಳ ಮೇಲೆ ಇರುವ ಪ್ರೀತಿಗಿಂತ ಎರಡುಪಟ್ಟು ತೋರ್ಪಡಿಕೆಗಾಗಿಯೇ ತೆಗೆದ ಪೇಸ್ಬುಕ್ ಗೆ ಸುರಿದು ಲೈಕ್ ಮತ್ತು ಕಾಮೆಂಟ್ ಗೆ ಕಾಯುತ್ತೇವೆ. ಆದರೆ ಆ ಹುಡುಗಿಯ ಪೋಸ್ಟಿಂಗ್ ನಾನು ತುಂಬಾ ದಿನದಿಂದ ಗಮನಿಸುತ್ತಲೇ ಇದ್ದೆ. ಆಕೆಯ ಪೋಸ್ಟಿಂಗ್ ನಲ್ಲಿ ನಾಯಿ ಕಡ್ಡಾಯವಾಗಿ ಇರುತ್ತಿತ್ತು. ಆದರೆ ಯಾವಾಗಲೂ ಅದೊಂದೇ ನಾಯಿಯಲ್ಲ. ಪ್ರತಿಸಾರಿಯೂ ಭಿನ್ನ! ಒಂದು ವಿಶೇಷವೆಂದರೆ ಅವೆಲ್ಲ ಬೀದಿನಾಯಿಗಳು ಅನಿಸುತ್ತಿತ್ತು. ಮರಿಗಳಿಂದ ಹಿಡಿದು ಮುದಿ ಹೆಣ್ಣುನಾಯಿಗಳ ವರೆಗೆ ಯಾವುದಾದರೂ ಒಂದು ಅಥವಾ ಹಲವುಗಳನ್ನು ಹಿಡುದುಕೊಂಡು ಊಟ ತಿನ್ನಿಸುತ್ತಲೋ, ಸ್ನಾನ‌ ಮಾಡಿಸುತ್ತಲೋ ಇರುವ ಫೋಟೊ ಕಾಣುತ್ತಿದ್ದೆ ನಾನು. ಇವೆಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಸಂಪರ್ಕಿಸಿ ಮಾತನಾಡಸಬೇಕು ಅಂತ ಕುತೂಹಲ ಹುಟ್ಟುವಂತೆ ಮಾಡಿದ್ದು ಅಂದು ಅವರು ಎರಡು ನಾಯಿಮರಿಗಳೊಂದಿಗೆ  ಬರೆದುಕೊಂಡ ಒಂದು ಪೋಸ್ಟ್. 

                                     

' ನೀವಿಬ್ರು ದೊಡ್ಡೋರ್ ಆಗೋವರ್ಗು ಸಾಕ್ತಿನೊ ಇಲ್ವೊ ಗೊತ್ತಿಲ್ಲ. ಆದ್ರೆ ನಿಮಗೆ ಯಾರಾದ್ರೂ ನೋವು ಮಾಡಿದ್ರೆ ವಾಪಸ್ಸು ಬೊಗಳುವಷ್ಟು ಬುದ್ದಿ ಬರೋತನಕ ಅಂತೂ ಆದಷ್ಟು ನಿಮ್ಜೊತೆ ಇರ್ತೀನಿ. ಯಾಕೆ ಗೊತ್ತಾ!? ನಾನೇನು ನಿಮ್ಮ ಅಮ್ಮನ ಮಾತ್ರ ಸಾಕಿ ನಿಮ್ಮಿಬ್ಬರನ್ನು ಮಾತ್ರ ಹೆಣ್ಣು ನಾಯಿಮರಿಗಳವು ಅಂತ ಇನ್ನೂ ಸರಿ ಕಣ್ ಬಿಡುವ ಮೊದಲೇ ತಂದು ಬಿಟ್ರಲ್ಲ ರೋಡಿಗೆ ಅವರಷ್ಟು ಕ್ರೂರಿ  ಅಲ್ಲ' ಸ್ಟೇಟಸ್ ನೋಡಿ ಸ್ಟಿಲ್ ಆಗಿ ನಿಂತು ಬಿಟ್ಟೆ. ಹಾಗೋ ಹೀಗೊ ಮಾಡಿ ಅವರನ್ನು ಸಂಪರ್ಕಿಸಿದೆ. ಪೇಸ್ಬುಕ್ ನಲ್ಲಿ ಸಾಲು ಸಾಲಾಗಿ ಹಾಕಿಕೊಂಡ ನಾಯಿಗಳ ಪೋಸ್ಟಿಂಗ್ ಬಗ್ಗೆ ಕೇಳಿದೆ. ನಿಜಕ್ಕೂ ನನ್ನ ಮನಸ್ಸು ತುಂಬಿ ಬಂದಿದ್ದು ಆಗ. 



' ಸರ್ ಆ್ಯಕ್ಚುಲಿ ನನ್ನ ಭಾರ್ಗವಿ ಅಂತ ಕರೆಯುವುದಕ್ಕಿಂತ ಹೆಚ್ಚು ನಾಯಿ ಹುಡುಗಿ ಅಂತಲೇ ಕರೆಯುತ್ತಾರೆ. ಪೇಸ್ಬುಕ್ ನಲ್ಲಿ ಯಾರೋ ಕಾಮೆಂಟ್ ಮಾಡಲಿ, ಲೈಕ್ ಮಾಡಲಿ ಅಂತ ಹಾಕಲ್ಲ. ನನ್ನ ನೋಡಿ, ಅದೇ ರೀತಿ ಆ ಬೀದಿ ನಾಯಿಗಳ ಬಗೆಗೆ ಯಾರಾದ್ರೂ ಒಬ್ರೇ ಒಬ್ರು ಕೇರ್ ತೆಗೆದುಕೊಳ್ಳುವಂತಾದರೆ  ಅಷ್ಟೇ ಸಾಕು. ಅಷ್ಟಕ್ಕೂ ಎಲ್ಲ ಜೀವಿಗಳಂತೆ ಅವು ಕೂಡ ಅಲ್ವಾ ಸರ್!? ಎಷ್ಟೊ ಜನ ತಮ್ಮ ಮನೆ ನಾಯಿಗೆ ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಬೀದಿನಾಯಿಗೆ ಒಂದು ಅಗುಳು ಅನ್ನ ಕೂಡ ಎಸೆಯಲ್ಲ ಸರ್. ಪ್ರತಿಯೊಬ್ಬರೂ ಆಡೋ ಮಾತು ಒಂದೇ ಸರ್, ಬೀದಿ ನಾಯಿಗಳು ಅಪಾಯ ಅವನ್ನ ಕೊಲ್ಲಬೇಕು ಅಂತಾರೆ ಆದರೆ ಇವತ್ತು ಮನುಷ್ಯ ಒಂಟಿ ಹೆಣ್ಣನ್ನು ಕಂಡ್ರೆ ಆ ಬೀದಿನಾಯಿಗಳಿಗಿಂತ ಹೆಚ್ಚಾಗಿ ನಡೆದುಕೊಳ್ಳುತ್ತಾನೆ. ಅಂತಹ ಎಷ್ಟು ಜನರನ್ನು ಬೀದಿಯಲ್ಲಿ ಕೊಂದಿದ್ದಾರೆ ಹೇಳಿ ಸಾರ್? ಆದರೆ ನಮಗೆ ನಮ್ಮದು ಮಾತ್ರ ಜೀವ ಅನ್ನಿಸಿಕೊಳ್ಳುತ್ತೆ. ಅವುಗಳದು ಜೀವ ಅಲ್ವ ಸರ್. ಅದರ ಬದಲು ಒಂದು ಕಡೆ ಸಾಕುವ ವ್ಯವಸ್ಥೆ ಯಾಕೆ ಮಾಡಬಾರದು? ಲಾಭ ಇದೆ ಅಂತ, ಪೂಜನೀಯ ಅಂತ ಗೋವನ್ನು ಕೊಲ್ಲುವಂತಿಲ್ಲ ಅಂತ ಆದೇಶ ಬರುತ್ತೆ ಆದರೆ ನಾಯಿ ಅಷ್ಟೊಂದು ಯೂಸ್ ಇಲ್ಲ ಅಂತ ಕೊಂದು ಬಿಡಬಹುದಾ? ' ಅಂತ ಪ್ರಶ್ನೆ ಹಾಕುತ್ತಾಳೆ. 




ನಂಗೆ ಅಪ್ಪ ಇಲ್ಲ ಸರ್, ನಾನು ಅಮ್ಮ ಇಬ್ಬರೆ. ನನಗೆ ಉಳಿದಂತೆ ನಮ್ಮ ಮನೆಯ ಮೆಂಬರ್ ಅಂದ್ರೆ ಈ ಬೀದಿನಾಯಿಗಳು. ನಾನು ಮನೆಯಿಂದ ಯಾವಾಗಲೂ ಎರಡು ಮೂರು ಊಟದ ಬಾಕ್ಸ್ ಎತ್ತಿಕೊಂಡು ಆಫೀಸ್ ಗೆ ನಡೆದೇ ಹೋಗ್ತಿನಿ. ದಾರಿಯಲ್ಲಿ ನಾಯಿಮರಿಗಳು, ತಾಯಿ ನಾಯಿ, ಮುದಿನಾಯಿಗಳು ಸಿಕ್ಕರೆ ಅವುಗಳಿಗೆ ಬಾಕ್ಸ್ ನಿಂದ ಊಟ ಹಾಕ್ತಿನಿ. ನಮ್ಮ ಮನೆಯಲ್ಲಿ ಯಾರೋ ಹಸಿದಿದ್ದಾರೆ ಅನ್ನುವಂತೆ ಆಗುತ್ತದೆ ಊಟ ಹಾಕದೇ ಇದ್ದಾಗ. ಮರಿಗಳನ್ನು ಬಿಟ್ಟು ತಾಯಿ ನಾಯಿ ಎಲ್ಲೋ ಹೊರಟು ಹೋಗುತ್ತದೆ. ಕೆಲವರು ಮರಿಗಳನ್ನು ತಂದು ಎಸೆದು ಹೋಗುತ್ತಾರೆ. ಅವುಗಳಿಗೆ ಸ್ನಾನ, ಹಾಲು, ಊಟ ವಗೈರೆ ನನ್ನದೇ ಸರ್. ನಂಗೆ ಅದರಲ್ಲಿ  ತುಂಬಾ ಖುಷಿಯಿದೆ ಸರ್. ಇಲ್ಲಿ ಸಿಗುವ ಖುಷಿ ನಂಗೆ ಬೇರೆಲ್ಲೂ ಸಿಕ್ಕಿಲ್ಲ. ನನ್ನ ಹಿಂದೆ ಮುಂದೆ ನೂರಾರು ಜನ ಆಡಿಕೊಳ್ಳುತ್ತಾರೆ ಸರ್. ನಾನು ಅದಕ್ಕೆ ಯಾವತ್ತೂ ಕೇರ್ ಮಾಡಿಲ್ಲ ಸರ್. ನಾನು ಸಾಕಿದ ಹಲವು ನಾಯಿಗಳನ್ನು ಹಲವು ಜನ ಬೇಕು ಅಂತಲೇ ವಿಷ ಹಾಕಿ ಸಾಯಿಸಿದ್ದಾರೆ ಸರ್. ಪಾಪ ಅವುಗಳ ಏನ್ ತಪ್ಪು ಮಾಡಿವೆ? ನಾಯಿ ಆಗಿರುವುದೇ ಅವುಗಳ ತಪ್ಪಾ!? ನನ್ನಲ್ಲಿ ಮನೆ ನಾಯಿ ಹೊರಗಿನ ನಾಯಿ ಅಂತ ಯಾವುದೇ ವಿಧಗಳಲ್ಲಿ ಸರ್ ಎಲ್ಲವೂ ನನ್ನ ನಾಯಿಗಳೇ...!' ಅಂತ ಮಾತು ಆಡುತ್ತಲೇ ಇದ್ದಳು. ನನ್ನ ಮನಸ್ಸು ತುಂಬಿತ್ತು. ಸತ್ತು ಹೋದ ಅವಳ ಮುದ್ದಿನ ನಾಯಿಗಳನ್ನು ನೆನಸಿಕೊಂಡು ಕಣ್ಣೀರಾಗಿದ್ದಳು. ಅವುಗಳ ಪ್ರೀತಿ ನೆನೆದು ಬಿಕ್ಕಳಿಸಿದಳು. ನೀವು ನಂಬಲೇ ಬೇಕು ಆಕೆಯ ವಯಸ್ಸು ಕೇವಲ ಇಪ್ಪತ್ತೆರಡು. ಇಷ್ಟು ವಯಸ್ಸಿಗೆ ಅದೆಂತಹ ಕಾಳಾಜಿ. ಯಾಕೋ ನಿಮ್ಮ ಮುಂದೆ ಹಂಚಿಕೊಳ್ಳಬೇಕು ಅನಿಸಿತು. ಮನಸ್ಸು ಒದ್ದೆ ಒದ್ದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!