ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ?

 ಹೊಸ್ತಿಲಾಚೆ ಬೆತ್ತಲೆ - 12



ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ್. ದೊಡ್ಡದಾಗಿ ಹೆಸರು ಮಾಡಿದ ದೊಡ್ಡ ಖಾಸಗಿ ಶಾಲೆಯಲ್ಲಿ ಓದು. ದೊಡ್ಡ ಖಾಸಗಿ ಶಾಲೆಗೆ ತಿಜೋರಿಯಲ್ಲಿ ಹೆಚ್ಚು ಹಣವಿರುವವರೇ ಸೇರಿಸುವುದು. ಅವರಪ್ಪನ ಕೆಲಸ ವಕೀಲಿಕೆ. ತಾಯಿ ಸರ್ಕಾರಿ ಹೈಸ್ಕೂಲ್‍ನಲ್ಲಿ ಕನ್ನಡ ಪಾಠ ಹೇಳುತ್ತಾರೆ. ಬಂಗ್ಲೆ, ಮನೆ ಕೆಲಸ ಮಾಡಿ ಹೋಗಲಿಕ್ಕೆ ಆಳುಗಳನ್ನು ಗುರ್ತು ಮಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ನಂಗ್ಹೇಗೆ ಗೊತ್ತಾಯ್ತು ಅಂದ್ಕೊಂಡ್ರಾ!? ದಿನ ಅವರ ಮನೆ ಮುಂದೆ ಸ್ಕೂಲ್ ಬಸ್ ನಿಲ್ಲಿಸಿ ಹತ್ತಿಸಿಕೊಂಡು ಹೋಗುವವನು ನಾನೇ. ಆದ್ದರಿಂದ ನಮ್ಮ ಬಸ್‍ಗೆ ಬರುವ ಮಕ್ಕಳ ಮನೆಯ ಹಿಸ್ಟರಿ ಬಗ್ಗೆ ಒಂಚೂರು ತಿಳಿದುಕೊಂಡಿರ್ತಿನಿ.
ಇದುವರೆಗೂ ಅವರ ಮನೆಯವರು ಯಾರೂ ಬಸ್ ಬಂದಾಗ ಹತ್ತಿಸಿ ಹೋಗಿದ್ದು ನಾ ಕಂಡಿಲ್ಲ. ಅಕ್ಕನೇ ತಮ್ಮನನ್ನು ಕೈ ಹಿಡಿದುಕೊಂಡು ಅವನ ಬ್ಯಾಗ್‍ನ್ನು ಇವಳೇ ಹೊತ್ತುಕೊಂಡು ಹತ್ತಿಬಿಡುತ್ತಾಳೆ. ವಿಷಯವೆಂದರೆ ಸ್ವಲ್ಪ ಅಂತರ್ಮುಖಿ ಹುಡುಗಿ. ಈ ನಡುವೆ ಸ್ವಲ್ಪ ಸೋತಂತೆ ಕಾಣುತ್ತಿದ್ದಳು. ಬಸ್ ಹತ್ತುವಾಗಲೇ ಕಣ್ಣು ತುಸು ಕೆಂಪಾಗಿ ಊದಿಕೊಂಡಿರುವಂತೆ ಕಾಣುತ್ತಿದ್ದವು. ಅವಳು ಅತ್ತಿರುವ ಕುರುಹುಗಳೇ ಅವು! ಹುಡುಗಿ ಅಳುವಂತದ್ದು ಏನಾಗುತ್ತಿದೆ? ಏನಾದರೂ ಸಮಸ್ಯೆಯಾ? ಯಾರದಾದರೂ ಕಾಟವಾ? ಎಂದು ಎಷ್ಟೋ ಬಾರಿ ನನ್ನಷ್ಟಕ್ಕೆ ನಾನು ಯೋಚಿಸಿಕೊಂಡಿದ್ದೆ.





ಬೆಳೆದ ಹುಡುಗಿ. ವೈಯಕ್ತಿಕ ವಿಚಾರ ಹಿಡಿದು ಮಾತಾಡುವುದು ಹೇಗೆ? ಈಗ ಒಂದಕ್ಕೆ ಸಾವಿರ ಅರ್ಥ ಕಟ್ಟಿ ಮಾತಾನಾಡುತ್ತಾರೆ. ಆದರೆ ಹುಡುಗಿಯ ಸ್ಥಿತಿಯನ್ನು ನೋಡಿ ಕೇಳದೇ ಇರಲಾಗಿಲ್ಲ. ಕೇಳಿದರೂ ಹೇಳುತ್ತಾಳೆ ಎಂಬ ಭರವಸೆ ಇರಲಿಲ್ಲ.

ಒಂದು ದಿನ ಹೀಗೆ ಸಮಯ ಹೊಂದಿಸಿಕೊಂಡು ಸ್ಕೂಲ್‍ನಲ್ಲಿ ಅವಳನ್ನು ಕರೆಯಿಸಿ ಮಾತಾಡಿದೆ. ಹುಡುಗಿ ಏನ್ನಿಲ್ಲ ಅನ್ನುತ್ತಿದ್ದಳಾದರೂ, ಮುಖದಲ್ಲಿ ದುಃಖ ಮಡುವು ಗಟ್ಟಿತ್ತು. ಕಣ್ಣುಗಳು ಹೇಳಿಬಿಡಬೇಕು ಅನ್ನುತ್ತಿದ್ದವು. ‘ಹೇಳು ಪುಟ್ಟ ಸ್ಕೂಲ್ನಲ್ಲಿ ಏನಾದರೂ ಸಮಸ್ಯೆ ಇದ್ಯಾ? ಬಗೆಹರಿಸೋಣ. ಖುಷಿಯಾಗಿ,ಚನ್ನಾಗಿ ಓದಬೇಕು. ಇಲ್ಲ ಅಂದರೆ ಮನೆಕಡೆ ಏನಾದರೂ....? ಮನೆ ಅಂದ ತಕ್ಷಣ ಹುಡುಗಿ ಅಳುವಂತಾದಳು. ಸಾವರಿಸಿಕೊಂಡು ಮಾತಾಡಿದಳು.


‘ನಮ್ಮ ಮನೆಯಲ್ಲಿ ನಾಲ್ಕು ಜನ. ನಾನು, ತಮ್ಮ,ಅಪ್ಪ, ಅಮ್ಮ. ಅಪ್ಪ ಯವಾಗ್ಲೂ ಹೊರಗಡೆನೇ ಇರ್ತಾರೆ. ನಾವಿದ್ದಾಗ ಮನೆಯಲ್ಲಿರೋದೇ ಕಡಿಮೆ. ಅಪ್ಪ ಯಾಕಪ್ಪ ಇವತ್ತೂ ಕೂಡ ಬ್ಯೂಸಿ ನಾ ಅಂದರೆ  ಲಾಯರ್ ಕೆಲಸನೇ ಹಾಗೆ ಮಗಳೇ, ತುಂಬಾ ಕೆಲಸ ಇರುತ್ತೆ. ನಾಳೆ ನಾವೆಲ್ಲ ಚನ್ನಾಗಿರಬೇಕು ಅಂದ್ರೆ ದುಡ್ಡು ಬೇಕಲ್ಲ ಅಂತಾರೆ. ಅಮ್ಮನೂ ಅಷ್ಟೇ! ಅವರು ಸ್ಕೂಲ್ ಅದೇನೊ ದೂರದ ಊರಂತೆ. ಬೆಳಗ್ಗೆ 7.30 ಕ್ಕೆ ಹೊರಟು ಬಿಡ್ತಾರೆ. ಬರೋದು ಏಳು ಗಂಟೆ. ಅಪ್ಪ ಯಾವಾಗ ಬರ್ತಾರೆ ಹೋಗ್ತಾರೆ ಗೊತ್ತಾಗಲ್ಲ. ಅದರ ನಡುವೆ ನಾನು ನನ್ನ ತಮ್ಮ ಇಬ್ಬರೆ. ಅವನ ಕೆಲಸ ಎಲ್ಲವನ್ನೂ ನಾನೇ ನೋಡಿಕೊಳ್ಳೊದು. ಅಮ್ಮ ಕೆಲವೊಮ್ಮೆ ನಮಗೆ ಊಟದ ಬಾಕ್ಸ್ ಕೂಡ ಮಾಡಿಕೊಟ್ಟು ಹೋಗಲ್ಲ. ನಾನೇ ಎಲ್ಲವನ್ನೂ ರೆಡಿ ಮಾಡಿಕೊಂಡು, ತಮ್ಮನಿಗೆ ಬಾಕ್ಸ್ ಯೂನಿಫಾರಂ ಎಲ್ಲವನ್ನು ನೋಡಿಕೊಳ್ಳಬೇಕು. ಅಷ್ಟೇ ಆದರೂ ಕೂಡ ಪರವಾಗಿಲ್ಲ ಸರ್

ಆದರೆ ಯಾವತ್ತೂ ನಂಗೆ, ನನ್ನ ತಮ್ಮಗೆ ಅಪ್ಪ ಅಮ್ಮ ಸರಿಯಾಗಿ ಮಾತಿಗೆ ಸಿಗಲ್ಲ. ಭಾನುವಾರ ಬಂತು ಅಂದ್ರೆ ಅಪ್ಪ ಪ್ರೆಂಡ್ಸ್, ಪಾರ್ಟಿ. ಅಮ್ಮ ಸುಸ್ತು ಅಂತ ಮಲಗಿ ಬಿಡ್ತಾರೆ. ನಾವೇನು ಅಂತ ಯಾರೂ ಕೂಡ ಕೇಳಲ್ಲ. ಆದರೆ ಪ್ರೋಗ್ರೆಸ್ ಕಾರ್ಡ್‍ಲ್ಲಿ ಎ+ ಬರಬೇಕು, ಇಲ್ಲ ಅಂದ್ರೆ ಗದರುತ್ತಾರೆ. ಸ್ಕೂಲ್‍ಗೆ ಪೋನ್ ಮಾಡಿ ಬೈತಾರೆ. ಐವತ್ತು ಕೇಳಿದರೆ ನೂರು ರೂಪಾಯಿ ಕೊಡ್ತಾರೆ ಅವನ್ನೆಲ್ಲ ತಗೊಂಡು ಏನ್ ಮಾಡೋದು ಸರ್. ಒಂದೇ ಒಂದು ಸಣ್ಣ ಭಾವನೆ ಹೇಳಿಕೊಳ್ಳೊಕೂ ಕಿವಿಗಳಿಲ್ಲ. ನಮ್ಮ ಪ್ರೆಂಡ್ಸ್ ಎಲ್ಲಾ ಅವರವರ ಅಪ್ಪ ಅಮ್ಮನ ಬಗ್ಗೆ ಹೇಳಿಕೊಳ್ತಿದ್ದರೆ ನಂಗೆ ಅಳು ಬರುತ್ತೆ. ತಂದೆ ತಾಯಿಗಳು ಬಂದು ಅವರನ್ನು ಸ್ಕೂಲ್ ಹತ್ತಿಸುವಾಗ ಬೇಜಾರಾಗುತ್ತೆ. ಸಂಜೆ ಅವರುಗಳು ತಾಯಿ ಮನೆ ಬಾಗಿಲಲ್ಲಿ ಕಾಯುತ್ತಿರುತ್ತಾರೆ. ನಮ್ಮ ಮನೆಯಲ್ಲಿ ಯಾರೂ ಇರಲ್ಲ. ಅಮ್ಮ, ಬರುವವರಿಗೂ ನಾವಿಬ್ಬರೇ. ಪಾಪ ಅಮ್ಮನು ಕೂಡ ಸುಸ್ತಾಗಿರುತ್ತಾರೆ. ನಮ್ಮ ಮಾತು ಕೇಳಿಸಿಕೊಳ್ಳುವಲ್ಲಿ ಅವರಿಗೆಲ್ಲಿ ತಾಳ್ಮೆ......’ ಮಾತು ಆಡುತ್ತಲೇ ಇದ್ದಳು ಹುಡುಗಿ. ನನಗೆ ಬೇಜಾರು ಎನಿಸಿತು. ಕೆಲವು ತಂದೆ ತಾಯಿಗಳ ಮೇಲೆ ಸಾಕಷ್ಟು ಸಿಟ್ಟು ಕೂಡ ಬಂದಿತು. ಇವರೆಲ್ಲ ಯಾವ ಸುಖಕ್ಕಾಗಿ ಹುಚ್ಚರಂತೆ ದುಡಿಯುತ್ತಿದ್ದಾರೆ? ಅಷ್ಟೊಂದು ದುಡಿದು ಗಳಿಸುವುದಾದರೂ ಏನು? ಮಕ್ಕಳ ಬಾಲ್ಯ ಮತ್ತೆ ಬರುತ್ತದೆಯೇ? ಮುಂದೆ ಪೋಷಕರು ಬಿಡುವಿದ್ದಾಗ ಮಕ್ಕಳು ಮಾತಾಡಲು ಸಿಗುತ್ತಾರೆಯೇ?

ಆಧುನಿಕ ಕಾಲದಲ್ಲಿ ಮಕ್ಕಳು ತಂದೆ ತಾಯಿಗಳನ್ನು ಯಾಕೆ ಹೊರಗೆ ಹಾಕುತ್ತಾರೆ ಅಂದರೆ ಬಾಲ್ಯದಲ್ಲಿ ತಂದೆ ತಾಯಿಗಳು ತಮ್ಮ ತಮ್ಮ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಲ್ಲಿ ಮಕ್ಕಳಿಗೆ ನಿಜಕ್ಕೂ ಹೆತ್ತವರ ಪ್ರೀತಿ ಸಿಗದೇ ಅವರ ಅಕ್ಷರಶಃ ಅವರ ಮೇಲಿನ ಮಮತೆ ಕಳೆದುಕೊಂಡು ಬಿಡುತ್ತಾರೆ. ಆಗ ಸಮಾಜ ಸುಮ್ಮನೆ ದೂರುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!