ಕೆಂಪು ಪೆಪ್ಪರಮೆಂಟು ; ಬಾವುಟದ ನಂಟು!

ಹದಿನೈದು ಎಂಬುದರ ನೆಪದಲ್ಲಿ....

ಹೊರಗೆ ಹನಿ ಮಳೆ, ಅಮ್ಮ ಗದರಿದಕ್ಕಷ್ಟೆ ರಚ್ಚೆ ಹಿಡಿದು ಅತ್ತು ಕೊನೆಯಲ್ಲಿ ಉಳಿಯುವ ಹನುಕಲು ಕಣ್ಣೀರು ಎಳೆ ನಯನಗಳಲ್ಲಿ ಜಿನುಗುವಂತೆ!. ತಣ್ಣನೆ ತಂಪಿಗೆ ಸಂಪೂರ್ಣ ಮಾರಿಕೊಂಡ ಚುಮು ಚುಮು ಬೆಳಕಿನ ನಿದ್ದೆಯನ್ನು ಕೊಂಡು ಸರಾಗ ಉಸಿರಿನೊಂದಿಗೆ ಸವಿಯುತ್ತಿದ್ದೆ! ನನ್ನನ್ನು ಪಕಳೆ ಮೇಲಿನ ದುಂಬಿಯ ಕಾಲ್ಗುರಿತುಗಳ ಕಲೆಯನ್ನು ಮೃದುವಾಗಿ ತಡವುವಂತೆ ಕೆನ್ನ ಕೆನ್ನೆಗೆ ತಟ್ಟಿ ಅದೆಷ್ಟು ಬಾರಿ ಕಂದ ಕಂದ ಅಂದಿದ್ದಳೋ! ನಾನೇ ಎದ್ದು ಬಿಡಲಿ, ಯಾರೇ ಎಬ್ಬಿಸಲಿ, ಅವ್ವನೇ ಎಬ್ಬಿಸಲಿ ಕಡ್ಡಾಯ ನಿಯಮದಂತೆ ಅಳು ನನ್ನದು. ಅವ್ವನಿಗೆ ನನ್ನದು ನಿತ್ಯ ಇದೇ ಚಾಕರಿ. ತಾಯಿಗೆ ಆನಂದ ಪಡಲಿಕ್ಕೆ ಮತ್ತೊಂದು ಕಾರಣ. ಮಗನ ಅಳುವನ್ನು ಕಾಡಿಸಿ, ಮುದ್ದಿಸಿ, ಸಮಾಧಾನಿಸಿ, ಮನ್ನಿಸಿ, ನಗಿಸಿ ಗೆಲ್ಲುತ್ತಾಳೆ. ಆಗ ತಾನೇ ಹಿತ್ತಲ ಬೇಲೆಯಲ್ಲಿ ಅರಳಿದ ಹೂವನ್ನು ಕಿತ್ತುಕೊಟ್ಟು, ಹನಿಯುವ ಮಳೆಗೆ ಬೊಗಸೆಯಾಗುವಂತೆ ಕೈ ನೀಡಿಸಿ ಅಳು ಮರೆಸುತ್ತಿದ್ದಳು.


ಅಂದು ಅಳುವಿನಲ್ಲೇ ಬಿಸಿ ನೀರಿನಲ್ಲಿ ಮಿಂದಿಸಿದ್ದಳು. ಅದೇನು ಆತುರವಿತ್ತೋ! ತಂಪಿಗೆ ವಿರುದ್ದವಾಗಿ ಹೋರಾಟಕ್ಕೆ ಬಿದ್ದಂತೆ ನನ್ನ ಮೈಯಿಂದ ಹೊಗೆ ಬರುತ್ತಿತ್ತು. ಒಂದು ಟವಲಷ್ಟೇ ಸುತ್ತಿಸಿ ‘ಜಿಜ್ಜಿಗೆ ಕೈ ಮುಗಿಯೋ ಕಂದ...!’ ಅವಳೇ ನನ್ನ ಕೈಗಳನ್ನು ಹಿಡಿದು ನಮಸ್ಕಾರ ಮಾಡಿಸಿದ್ದಳು. ಬಟ್ಟೆಯೇ ಬೇಡವಾಗದಷ್ಟು ಸ್ವಾರ್ಥಹೀನ ನಿಜ ಮನುಷ್ಯತ್ವದ ವಯಸ್ಸದು! ಅವ್ವ ಬಿಳಿ ಜಡ್ಡಿ, ಬಿಳಿ ಅಂಗಿ ತಂದು ಉಡಿಸಲು ಬಂದಾಗ ತಪ್ಪಿಸಿಕೊಂಡು ಓಡಿದ ನೆನಪು. ಬಣ್ಣಗಳನ್ನೂ ನಿಖರವಾಗಿ ಗುರುತಿಸದಷ್ಟು ಎಳೆಯನಾಗಿದ್ದೆ. ಅದು ಬಿಳಿಯೋ ಕೆಂಪು ಅಂದು ತಿಳಿದಿರಲಿಲ್ಲ ಮರೆತ ಕನಸಿನಂತೆ! ನಿತ್ಯ ಇದೇ ಪರಿಯಾದರೂ ಇಂದು ಅವ್ವನೇಕೆ ವಿಶೇಷತೆ ವಹಿಸುತ್ತಿದ್ದಾಳೆ ಅಂತ ಅಂದುಕೊಳ್ಳುವಷ್ಟೂ ಅನುಮಾನದ ವಯಸ್ಸು ನನ್ನದಾಗಿರಲಿಲ್ಲ. ಅವ್ವ ಸಾಹಸಿಯಾಗಿ ಬಟ್ಟೆ ತೋಡಿಸಿ ಚಂದಿರಗೂ ದೃಷ್ಟಿಯಾಗುವುದೆಂದು ಇಟ್ಟುಕೊಂಡ ಕಪ್ಪು ಕುಳಿಯಂತೆ ನನ್ನ ಹಣೆಗೊಂದು ಕೆನ್ನೆಗೊಂದು ನಾಲ್ಕಾಣೆ ಗಾತ್ರದ ಕಪ್ಪು ಕಾಡಿಗೆ ಹಚ್ಚಿ ಬಿಟ್ಟಿದ್ದಳು. ಕಪ್ಪು ರೊಚ್ಚಿಗೆದ್ದು ಬಿಳಿ ಬಟ್ಟೆಗೆ ಒರೆಸಿತೆಂದು ಒಂದು ಚಂದದ ಘಮ್ ಎನ್ನುವ ಪೌಡರಿನಿಂದ ಕಪ್ಪಿನ ಕಿಚ್ಚನ್ನು ಸಮಾಧಾನಿಸಿದ್ದಳು. ಎಡಗೈಯಲ್ಲಿ ಗದ್ದವನ್ನಿಡಿದುಕೊಂಡು ತಲೆಯಲ್ಲಿ ಕ್ರಾಪ್ ಬಿಡಿಸುತ್ತಿದ್ದಳು. ಮಗ ಈ ಕ್ರಾಪಿನ ಈ ಗೆರೆ ಕೊರೆದಂತೆ ಸತ್ಯ ಸುಳ್ಳು, ಒಳ್ಳೆಯದು ಕೆಟ್ಟದ್ದರ ನಡುವೆ ನಿಖರವಾಗಿ ಬಾಳಲಿ ಎಂದು ಮನಸ್ಸಿನಲ್ಲಿ ಗಣಿತದ ಲೆಕ್ಕ ಬರೆಯುತ್ತಿದ್ದಳೋ ಏನೋ!?
ಹೊರಗೆ ಮಳೆ. ಅದು ವಿಶೇಷ ಅನಿಸುವುದೇ ಇಲ್ಲ. ಅದು ನಿಂತು ಹೋದರೇನೇ ಕಸಿವಿಸಿ ಅನ್ನುವಷ್ಟರಮಟ್ಟಿಗೆ ಆಪ್ತವಾಗಿತ್ತು. ಅವ್ವ ಅಜ್ಜನ ದೊಡ್ಡ ಕೊಡೆ ತಗೆದುಕೊಂಡು ನನ್ನನ್ನು ಕಂಕುಳಲ್ಲಿ ಕೂರಿಸಿಕೊಂಡು  ಮನೆಯಿಂದ ಹೊರಬಿದ್ದಳು. ಕೊಡೆಯ ಮೇಲಿ ಕಪ್ಪ ಬಟ್ಟೆಗೆ ಮುತ್ತಿಡುವಂತೆ ಹನಿಯ ಸದ್ದು, ಕೆಸರೊಳಗೆ ಅವ್ವ ಕಿತ್ತಿಡುವ ಹೆಜ್ಜೆಗಳಿಂದ ನನಗಾಗುತ್ತಿದ್ದ ಕುಲಕು, ಖುಷಿ ತರುತ್ತಿತ್ತು!


ನಡೆದು ಬಂದ ಅವ್ವ ಶಾಲೆಯ ಮುಂದೆ ಬಂದು ನಿಂತಿದ್ದಳು! ಅದೇ ಅವ್ವ ‘ಸಿಸ್ವಾರ ಸಾಕು ಮಗ, ನೀ ದೊಡ್ಡನಾಗಿ. ದೊಡ್ಡಸಾಲಿಗೆ ಹೋಗ್ಬೇಕು’ ಅಂತ ಅದೇ ಕಂಕುಳಲ್ಲಿಟ್ಟುಕೊಂಡು ಸೇರಿಸಿ ಬಂದಿದ್ದಾಳೆ, ಮಾಸ್ತರ್ ತಲೆಯ ಮೇಲಿಂದ ಎಡಗವಿಗೆ ಬಲಗೈ ಮುಟ್ಟಿಸಿ ಏನೋ ಕಂಡು ಹಿಡಿದವರಂತೆ ಶಾಲೆಗೆ ಸೇರಿಸಲು ಅನುಮತಿಸಿದ್ದರು. ವಾರವಿಡಿ ಜಗತ್ತಿನಲ್ಲಿ ಎಲ್ಲವನ್ನು ಕಳೆದುಕೊಂಡವನಂತೆ ‘ಅವ್ವಾ ಅವ್ವಾ...’ ಅಂತ ಅತ್ತಿದ್ದೆ! ಅಲ್ಲಿಂದ ಎರಡು ತಿಂಗಳು ಕಳೆದರೆ ಬರುವುದೇ ಆಗಸ್ಟ್! ಅವ್ವ ಶಾಲೆಯ ಮುಂದೆ ಬಂದಾಗ ಎದುರುಮನೆಯ ಅಕ್ಕ, ಸತೀಸಣ್ಣ ಅಲ್ಲಿ ಇಲ್ಲಿ ಜೋರು ಜೋರಾಗಿ ಓಡಾಡುತ್ತಿದ್ದರು. ನನ್ನದೇ ಬಣ್ಣದ ಬಟ್ಟೆ ಹಾಕಿದವರೇ ಎಲ್ಲ! ಅವ್ವ ನನ್ನ ಮಾಸ್ತರ್ ಹತ್ರ ಬಂದು ‘ಬಿಟ್ಟು ಹೋಗಲಿ ಮಾಸ್ತರಾ!?’ ಅಂದಿದ್ದಳು. ಜಗತ್ತಿನಲ್ಲಿ ಇವರೊಬ್ಬರಿಗೆ ಮಗ ಹುಟ್ಟಿದ್ದಾನೇನೋ ಅಂತ ಅಂದಿಕೊಂಡರೇನೊ ಮಾಸ್ತರ್! ಪ್ರತಿಯೊಬ್ಬ ತಾಯಿಗೆ ತನ್ನ ಮಗ ಮಾತ್ರವೇ ಮುದ್ದು!

ಹನಿಗಳ ನಿಂತ ಸಮಯ. ನೆಲದಲ್ಲಿ ಮೂಡಿದ್ದ ಬಣ್ಣ ಬಣ್ಣದ ಚಿತ್ರ. ಕಂಬಕ್ಕೆ ಮೇಲಿಂದ ಕೆಳಕ್ಕೆ ಕಟ್ಟಿ ಬಿಟ್ಟಿದ್ದ ದಾರ. ಎಲ್ಲರನ್ನು ಕಂಬದ ಸುತ್ತ ನಿಲ್ಲಿಸುತ್ತಿದ್ದ ಮಾಸ್ತರ್. ಡಂ ಡಂ ಬಡಿಯುತ್ತಿದ್ದ ಸತೀಸಣ್ಣ. ಇವರೆನ್ನೆಲ್ಲ ನೋಡಿ ಅಮ್ಮ ಹೋಗಿದ್ದೆ ಗೊತ್ತಾಗಲಿಲ್ಲ. ‘ನಡಿ ನಡಿ ಹುಡುಗ್ರು ಜೋಡಿ ನಿಲ್ಲೋಗು’ ಅಂದಿದ್ರು ಮಾಸ್ತರ್. ನನ್ನಿಂದ ಹಿಂದೆ ನಿಂತಿದ್ದ ಪವಿತ್ರಕ್ಕ ‘ಬಾವುಟ ಬಾವುಟ ಕಣೋ ಬಾವುಟ ಈಗ’ ಅಂತ ಅಂದಿದ್ದು ಕೇಳಿಸಿತ್ತು. ಬಾವುಟ ಅಂದ್ರೇನು? ಅಂದು ನನ್ನ ಪಾಲಿಗೆ ಅದೊಂದು ಚಂದದ ಪ್ರಶ್ನೆಯಾಗಿತ್ತು. ಪೂಜೆಯ ಗಂಟೆ ಬಾರಿಸಿದಾಗ ಗಾಂಧಿ ತಾತನಿಗೆ ಕೈಮುಗಿರಿ ಕೈಮಗಿರಿ ಅಂದಿದ್ರು ದೊಡ್ಡಮಾಸ್ತರ್. ಯಾರು ಗಾಂಧಿ ತಾತ? ಏನಿದು? ಯಾಕೆ ಪೂಜೆ? ಪ್ರಶ್ನೆಗಳೊಳಗೆ ಪ್ರಶ್ನೆಗಳು. ಉತ್ತರಿಸಿವವರಿಲ್ಲ! ಏನೇನೊ ಹೊಸ ಹೊಸ ಹಾಡುಗಳನ್ನು ಹೇಳಿಕೊಟ್ಟ ನೆನಪು. ಬಿಳಿ ಪಂಚೆ, ಬಿಳಿ ಅಂಗಿಯ ನಮ್ಮ ಕೇರಿಯ ಒಂದಣ್ಣ ಕಂಬದ ದಾರ ಎಳೆದಾಗ ಎಲ್ಲರೂ ಚಪ್ಪಾಳೆ ತಟ್ಟಿದ್ದರು. ಅವರನ್ನು ನೋಡಿ ನಾನು ಜೋರಾಗಿ ತಟ್ಟಿದ್ದೆ. ಎಲ್ಲರೂ ಹಣೆಯ ಮೇಲೆ ಕೈ ಮೂರಾಲ್ಕು ಬೆರಳಗಳನ್ನು ಬಿಚ್ಚು ಗೈಲಿ ಇಟ್ಟು ಮೇಲೆ ನೋಡುತ್ತಿದ್ದರು. ನಾನು ನೋಡಿದೆ. ಇದೇ ಬಾವುಟ, ಇದೇ ಬಾವುಟ ಹೌದು ಬಾವುಟ ಅಂದುಕೊಂಡೆ! ಅಲ್ಲಿ ಬಣ್ಣ ಇದೆ, ಬಣ್ಣ ಬಣ್ಣಗಳಿವೆ ಆದರೆ ಯಾವ ಬಣ್ಣ ಅಂತ ಗೊತ್ತಾಗಲಿಲ್ಲ. ಅವರನ್ನು ನೋಡಿ ನಾನು ಕೂಡ ಹಣೆಯ ಮೇಲೆ ಬೆರಳನೊಡ್ಡಿ ಕೈಎತ್ತಿ ಮೇಲೆ ನೋಡಿದೆ. ಅವರೆಲ್ಲ ಹಾಡು ಹಾಡುತ್ತಿದ್ದರು. ಎಲ್ಲವೂ ಹೊಸ ಅನುಭವ. ಹೊಸ ಪ್ರಪಂಚವೇ ಅನಿಸಿತು. ಇದು ನನ್ನ ಶಾಲೆ ಅಲ್ಲವೇ ಅಲ್ಲ ಅನ್ನಿಸ ತೊಡಗಿತು. ‘ಮಳೆ ಇದೆ ಬೇಡ ಊರೊಳಗೆ’ ಏನಕ್ಕೆ ಊರೊಳಗೆ? ಹೇಳುವರ್ಯಾರು?
ನಮ್ಮನ್ನೆಲ್ಲಾ ಒಂದು ರೂಂನಲ್ಲಿ ಕೂರಿಸಿದ ನೆನಪು. ನಾವು ನೆಲದ ಮೇಲೆ ಕೂತು ಬರೀ ಹುಡುಕುವ ಕಣ್ಣುಗಳಲ್ಲೇ ನೋಡುತ್ತಿದ್ದೇವು. ಟೇಬಲ್ ಮೇಲೆ ಇಟ್ಟಿದ್ದ ಕೆಂಪನೆಯ ಪೆಪರ್‍ಮೆಂಟ್ ಸೆಳೆದು ಬಿಟ್ಟಿತ್ತು. ಗಾಂಧೀಜಿ, ಹೋರಾಟ, ಸ್ವತಂತ್ರ, ಆಂಗ್ಲರು ಪದಗಳು ಆಗಾಗ್ಗೆ ಕಿವಿ ಮೇಲೆ ಬಿದ್ದು ಜಾರಿ ಹೋಗುತ್ತಿದ್ದವು. ಕೂತಲೇ ನಮ್ಮ ಆಟ ಸಾಗಿತ್ತು. ಎಲ್ಲಾ ಮುಗಿದು ಕೈಗೆರಡು ಪೆಪರ್‍ಮೆಂಟ್ ಸಿಗುವ ಹೊತ್ತಿಗೆ ಅವ್ವ ಆಚೆ ಕಡೆ ಕಾದಿದ್ದಳು. ಅವ್ವನ ಬಳಿ ಸೇರಿದ ನಾನು ಪ್ರಶ್ನೆಗಳ ಸುರಿಮಳೆಯೇ ಸುರಿಸಿದ್ದೆ. ಕೊಡೆಯ ಹೊರಗೆ ಸುರಿಯುತ್ತಿದ್ದ ಮಳೆಯೇ ಯಾಕೋ ನನ್ನ ಪ್ರಶ್ನೆಗಳ ಜಡಿಮಳೆಗೆ  ಮೂಕವಾಯಿತು ಅನಿಸಿತು. ಅವ್ವ ಏನೇನೊ ಹೇಳಿದ ನೆನಪು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!