ಅವ್ನನೆಲ್ಲಿ ಹೋಗ್ತಾನೆ, ಅಲ್ಲಿ ಗಣಪತಿ ಮಾಡೊ ಹತ್ರ ಇರ್ತಾನೆ!
ಆಗಾಗ ಬಾಲ್ಯ ಕಳ್ಳನಂತೆ ಕದ್ದು ನೋಡುತ್ತದೆಯಾದರೂ ಭೂಮಿಗೆ ಗಣೇಶ ಬರುತ್ತಾನೆ ಅನ್ನೊ ಈ ದಿನ ಈ ಗಣೇಶ ಬದಲೂ ಬಾಲ್ಯದ ಗಣೇಶನೇ ನನ್ನನ್ನು ನಡೆಸಿದಂತಿದೆ! ಇಲ್ಲಿ ಬಾಲ್ಯ ಬರೀ ಇಣುಕುವುದಿಲ್ಲ ಬದಲಿಗೆ ಆವರಿಸಿಕೊಳ್ಳುತ್ತದೆ. ಆರ್ಕೇಸ್ಟ್ರಾ, ಕುಣಿತ, ಚಂದಾ, ಕೋಮುಗಲಾಭೆ, ಅದ್ದೂರಿತನ ಯಾವುದೂ ನನಗೆ ಅರಿವಾಗದಷ್ಟು ಬಾಲ್ಯ ತುಂಬಿಕೊಳ್ಳುತ್ತದೆ. ಯಾರ್ಯಾರ ಪಾಲಿಗೆ ಗಣೇಶ ಏನಾಗಿ ಬರುತ್ತಾನೋ ನಾ ಅರಿಯೇ! ನನ್ನ ಪಾಲಿಗೆ ಗಣೇಶ ಬಾಲ್ಯದ ಐಕಾನ್. ಪ್ರತಿ ವರ್ಷ ನಾನು ಈ ದಿನವನ್ನು ಇಷ್ಟಪಡಲಿಕೆ ಇದೊಂದೇ ಕಾರಣ ನನಗೆ. ಬಾಲ್ಯ ವೆಂದರೆ ಬಾಲ್ಯವೇ! ಅದು ಅಂದಿನ ಬಾಲ್ಯ. ಈಗಿನಂತೆ ಮೊಬೈಲ್ ಗೇಮ್, ಬರೀ ಹೋಂ ವರ್ಕ್ ಮಾಡುವಷ್ಟು ಆ ಬಾಲ್ಯ ಕೆಟ್ಟು ಹೋಗಿರಲಿಲ್ಲ. ಶಾಲೆಯ ಗಂಟೆ ಬಾರಿಸಿದಷ್ಟೇ ಸಾಕು ನಮಗೆ ಉಸೇನ್ ಬೋಲ್ಟ್ ನಾಚುವಂತೆ ಮತ್ತು ಶಾಲೆಯೇ ನಮ್ಮನ್ನು ಹಿಡಿಯಲು ಅಟ್ಟಿಸಿಕೊಂಡು ಬೆನ್ನತ್ತಿ ಬಂದಿದೆಯೇನೊ ಎನ್ನುವಂತೆ ಓಟ ಕೀಳುತ್ತಿದ್ದೇವು. ಮನೆಯ ಹೊರಗೆ ನಿಂತು ಪಾಟಿಗಂಟನ್ನು ಮನೆಯೊಳಗೆ ಎಸೆದು ಕಮ್ಮಾರ ಮನೆ ಮುಂದೆ ಹಾಜರ್! ನಾವು ಹೋದ ತಕ್ಷಣ ಅವರು ತಲೆನೋವೇ ಬಂತೇನೊ ಅನ್ನುವಂತೆ ಕೋಪಿಸಿಕೊಳ್ಳುತ್ತಿದ್ದರು. ಅವರು ಕೆರೆಯಿಂದ ಮಣ್ಣು ತಂದು ಕೊನೆಯಲ್ಲಿ ಗಣೇಶನನ್ನು ಗಿರಾಕಿಗಳ ಕೈಗೆ ನೀಡುವವರೆಗಿನ ಪ್ರತಿದಿನದ ಹಾಜರಿ ಅಲ್ಲಿ ನಮ್ಮದು. ಅದು ನಮ್ಮೂರ ಕಮ್ಮಾರ ಮನೆ. ಗಣಪತಿ ಮಾಡುವ ನಮ್ಮೂರಿನ ಏಕೈಕ ಮನೆ. ಒ...