ನಿಮಗೇನು ಬೇಕೆಂದು ಅರಿಯದಷ್ಟು ದಡ್ಡನೇ ಸೃಷ್ಟಿಕರ್ತನು!
ಅರ್ಥವಿಲ್ಲದ ಪ್ರಾರ್ಥನೆಯ ಬಗ್ಗೆ ಒಂದು ಜಿಜ್ಞಾಸೆ ಅಷ್ಟೇ ಇಲ್ಲಿ!
ನನ್ನ ಒಟ್ಟು ವಿಷಯ ಪ್ರಾರ್ಥನೆಯ ಬಗೆಗೆ ಅಷ್ಟೇ. ಅನೇಕ ಮಂದಿ ದೇವರೊಂದಿಗೆ ವೈಯಕ್ತಿವಾಗಿ ಜಗಳಕ್ಕಿಳಿದವರಂತೆ ಪರಿ ಪರಿಯಾಗಿ ಜೋರು ದನಿಯಲ್ಲಿ ಆತನೊಂದಿಗೆ ಮಾತಿಗಿಳಿದು ಬಿಡುತ್ತಾರೆ. ಇನ್ನು ಕೆಲವರು ಭಕ್ತಿಯ ಹಾಡಿನಿಂದ, ಕುಣಿತಗಳಿಂದ ದೇವರನ್ನು ಸಂತುಷ್ಟಗೊಳಿಸುವ ಹುನ್ನಾರು ಹೂಡಿರುತ್ತಾರೆ. ಇನ್ನೂ ಕೆಲವರು ಬೇಡವುದು ಅಷ್ಟೇ ಅಲ್ಲದೇ ಬಗಬಗೆಯ ಕಾಣಿಕೆಗಳೊಂದಿಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ಮತ್ತೇ ಕೆಲವರು ಧ್ವನಿವರ್ಧಕದಲ್ಲಿ ಊರಲ್ಲಿರುವವರ ಪರವಾಗಿ ಪ್ರಾರ್ಥನೆಗೆ ನಿಂತುಬಿಟ್ಟಿದ್ದೇವೆ ಅನ್ನುವ ಮಟ್ಟಿನ ರೇಜಿಗೆ ಒಳಗಾಗುತ್ತಾರೆ. ಇವೆಲ್ಲವೂ ನಾನು ಕಂಡು, ನೀವು ಕೂಡ ಕಂಡಿರುವ ಪ್ರಾರ್ಥನೆಯ ಹಲವು ಮುಖಗಳು. ಇಲ್ಲಿ ಪ್ರಾರ್ಥನೆಯನ್ನು ಅಲ್ಲಗಳೆಯುವ, ಮೂದಲಿಸುವ ಇರ್ಯಾದೆ ಖಂಡಿತ ನನ್ನದಲ್ಲ. ಪ್ರಾರ್ಥನೆಯ ಒಂದು ಜಿಜ್ಞಾಸೆ ಅಷ್ಟೇ!
ಪ್ರಾರ್ಥನೆ ಮೂಲತಃ ಸಂಸ್ಕøತ ಪದ. ಅದರ ಅರ್ಥವಿಷ್ಟೇ. ನನ್ನಗಿಂತ ದೊಡ್ಡವನನ್ನು ಅಥವಾ ದೇವರನ್ನು ಬೇಡಿಕೊಳ್ಳುವ ಪರಿ. ಬೇಡಿಕೊಳ್ಳುವುದು ಅಂದರೆ ಅರ್ಥವಾಗಿರಬೇಕು ನಿಮಗೆ. ನಮ್ಮಲ್ಲಿ ಇರದಿರುವ ಅಥವಾ ಇರುವುದಕ್ಕಿಂತ ಹೆಚ್ಚು ಕೊಡು ಅನ್ನುವುದೇ ಆಗಿದೆ. ( ಪ್ರ=ವಿಶೇಷವಾಗಿ, ಅರ್ಥ್=ಪ್ರಯೋಜನವನ್ನು ಅಪೇಕ್ಷಿಸುವುದು) ಪ್ರಾರ್ಥನೆ ಅನ್ನುವುದು ಏನಾದರೂ ಉದ್ದೇಶವಿಟ್ಟುಕೊಂಡೆ ಮಾಡುವುದಾಗಿದೆ. ಅಂದರೆ ಎಲ್ಲಾ ಪ್ರಾರ್ಥನೆಗಳು ಸ್ವಾರ್ಥದವೇ ಆಗಿರುತ್ತವೆ. ಬಯಕೆಗಳಿಲ್ಲದೇ ಪ್ರಾರ್ಥನೆಗಳಿಲ್ಲ ಎಂಬುದೇ ನನ್ನ ವಾದ. ಅದೊಂದು ದೈನ್ಯ ಸ್ಥಿತಿ. ನಮಗಿಂತ ಉನ್ನತ ಮಟ್ಟದಲ್ಲಿರುವ ಶಕ್ತಿಯೊಂದನ್ನು ಪ್ರಸನ್ನಗೊಳಿಸುವ ಮೂಲಕ ಅದರಿಂದ ಏನಾದರೂ ಪಡೆಯಲು ಒಡ್ಡುವ ಆಮಿಷವೆನ್ನಬಹುದೇ?
ಈಗ ನಾನು ಮೂಲ ಪ್ರಶ್ನೆಗೆ ಬರುತ್ತೇನೆ. ನೀವು ಯಾರನ್ನು ಕುರಿತು ಬೇಡುತ್ತಿದ್ದೀರಿ? ಪ್ರಾರ್ಥಿಸುತ್ತಿದೀರಿ? ಅವನಿಂದಲೇ ಈ ಸೃಷ್ಟಿಯನ್ನೆವುದು ಆಗಿದೆ ಎಂಬುದು ನಿಮ್ಮ ಮತ್ತು ನಮ್ಮ ವಾದವೂ ಕೂಡ. ಇದನ್ನು ಎಲ್ಲರೂ ಒಪ್ಪಬಹುದು. ನಾವು ಯಾವುದೋ ಒಂದು ಮೂಲದಿಂದ ಬಂದಿರಲೇಬೇಕು ಎಂಬುದು ಒಂದು ಸತ್ಯ. ನಮ್ಮನ್ನು ಸೃಷ್ಟಿಮಾಡಿದ ಸೃಷ್ಟಿಕರ್ತನನ್ನು ಕುರಿತು ಬೇಡುತ್ತಿದ್ದೇವೆ ಎಂದರೆ, ಅವನನ್ನು ಪ್ರಸನ್ನನ್ನಾಗಿ ಮಾಡಲು ಏನೆಲ್ಲಾ ಮೋಡಿ ಮಾಡುತ್ತಿದ್ದೇವೆ ಅಂದರೆ ಸೃಷ್ಟಿ ಮಾಡಿರುವ ಶಕ್ತಿಗೆ ತಾನು ಸೃಷ್ಟಿಮಾಡಿರುವ ಜೀವಿಗಳಿಗೆ ಯಾವ ಕಾಲಕ್ಕೆ ಏನು ಬೇಕು ಅಂತ ಗೊತ್ತಿರುವುದೇ ಇಲ್ಲವೇ? ಅದು ಅವನೇ ಮಾಡಿದ ವರ್ಕಿಂಗ್ ಮಾಡೆಲ್ ಆದ್ಮೇಲೆ ಅದರ ಕಂಟ್ರೋಲ್ ಅವನ ಬಳಿಯೇ ಇರುತ್ತದೆ ಅಲ್ಲವೇ? ಅವನೇ ಸರ್ವಾಂತರ್ಯಾಮಿ, ಸರ್ವಶಕ್ತ ಎಂದಾದ ಮೇಲೆ ಅಷ್ಟು ಚಿಕ್ಕ ವಿಷಯವನ್ನು ಅರಿಯದಷ್ಟೂ ದುರ್ಬಲನೇ ಸೃಷ್ಟಿಗಾರ? ನಿಜಕ್ಕೂ ಹೇಳಬೇಕು ಅಂದರೆ ಆತನ ಸೃಷ್ಟಿಯಲ್ಲಿ ಒಂದು ತಪ್ಪು ಹುಡುಕಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಬೀಜ ಮೊಳೆಯುವುದರಿಂದ, ಮನುಷ್ಯನ ಉಸಿರಾಟದಿಂದ ಸಾವಿನವರೆಗೂ ಎಲ್ಲವನ್ನು ವ್ಯವಸ್ಥಿವಾಗಿ ರೂಪಿಸಿದವನಿಗೆ ಯಾವ ಸಮಯಕ್ಕೆ ಏನು ಮಾಡಬೇಕು? ಏನು ಕೊಡಬೇಕೆಂಬ ಪ್ರಜ್ಞೆ ಇರಲಾರದು ಎಂದು ಭಾವಿಸುತ್ತೀರಾ? ಅಥವಾ ಆತನು ಮರೆತಿದ್ದಾನೆ ಅದನ್ನು ನೆನಪು ಮಾಡಲೋಸುಗ ನಮ್ಮ ಪ್ರಾರ್ಥನೆಯೆಂದು ನಿಮ್ಮ ವಾದವೇ? ಅಂತಹ ಮರಗುಳಿಯೇ ಆಗಿದ್ದರೆ ಇಂತಹ ಅದ್ಬುತ ಪ್ರಖಾಂಡ, ವ್ಯವಸ್ಥಿತ ಸೃಷ್ಟಿ ಅವನಿಂದ ಸಾಧ್ಯವಾಗುತ್ತಿತ್ತೇ? ಇನ್ನೂ ಕೆಲವರಂತೂ ನಾನು ದೇವರಿಗೆ ಖುಷಿ ಪಡಿಸಿದೆ,ಸಂತೋಷಿಗೊಳಿಸಿದೆ ಅದರಿಂದ ಒಳ್ಳೆದಾಗುತ್ತೆ ಅಂತಾರೆ. ಖುಷಿ ಪಡಿಸಲು ಗೊತ್ತಿಲ್ಲದವನನ್ನು ಆತ ಕೈಬಿಡುವನೆ? ತಾನೇ ಸೃಷ್ಟಿಸಿದ ಮಕ್ಕಳಿಗೆ ಇಬ್ಬುಗೆ ನೀತಿ ಮಾಡುವನೇ? ಗೊತ್ತಿಲ್ಲದಿರುವುದು ಯಾರ ತಪ್ಪು? ಮನುಷ್ಯನದೇ? ತಿಳಿಯಲ್ಲಿಕ್ಕೆ ಅವಕಾಶಕೊಡದ ಸೃಷ್ಟಿಕರ್ತನದೇ?
ಒಬ್ಬ ತಂದೆ ತನ್ನ ಮಗನಿಗೆ ಏನು ಬೇಕು ಎಂದು ಅರಿಯನೇ? ತಾಯಿಗೆ ತನ್ನ ಮಗುವಿಗೆ ಯಾವಾಗ ಹಾಲು ಕುಡಿಸಬೇಕೆಂಬುದು ತಿಳಿಯದೇ? ಯಾವುದನ್ನು ಕೊಡಬೇಕು ಮತ್ತು ಯಾವುದನ್ನು ಕೊಡಬಾರದು ತಮ್ಮ ಮಗುವಿಗೆ ಎಂದು ತಂದೆ ತಾಯಿಗಳು ಭಾವಿಸಿದಂತೆ ಆತ ಭಾವಿಸಲಾರನೇ? ತನಗೆ ಕೊಟ್ಟಿರುವುದು ತನ್ನಿಂದ, ತನ್ನ ಕೈಯಿಂದ ನಿಭಾಯಿಸಲು ಮಾತ್ರವೆಂದು ನಾವೇಕೆ ಬಗೆಯಬಾರದು. ಸೈಕಲ್ ತಳ್ಳಲು ಬಾರದ ಮಗುವಿಗೆ ಯಾವ ತಂದೆಯೂ ಕೂಡ ಬೈಕ್ ಕೊಡಿಸಲಾರ ಅಲ್ಲವೇ? ಮಗುವಿನ ಸಾಮಥ್ರ್ಯಕ್ಕೆ, ಅವಶ್ಯಕತೆಗೆ ತಕ್ಕಂತೆ ಅನುಕೂಲತೆಗೆ ಸಂಬಂಧಿಸಿದಂತೆ ಸವಲತ್ತುಗಳನ್ನು ತಂದೆಯಾದವನು ಮಾಡಿಕೊಡುವುದಿಲ್ಲವೇ? ಮಗು ಬೇಕೆ ಬೇಕು ಎಂದು ಹಠ ಮಾಡಿದಾಗ ಯಾವುದೋ ಒಂದನ್ನು ಕೋಪದಿಂದ ಬಿಸಾಕಿ ಹಾಳಾಗಿ ಹೋಗು, ಮೊದ್ಲು ಎದ್ದು ಹೋಗು ಇಲ್ಲಿಂದ ಎಂದು ಅಬ್ಬರಿಸಿದಂತೆ ಸೃಷ್ಟಿಕರ್ತ ಅಬ್ಬರಿಸಲಾರ ಎಂದು ಭಾವಿಸಿದ್ದೀರಾ? ನಮ್ಮ ಈ ಕಾಲದ ಎಲ್ಲಾ ಅಸ್ಥಿರತೆಗೆ ಅಂಥದೊಂದು ಹಠವೇ ಕಾರಣವಿರಬಹುದು ಅನಿಸುತ್ತೆ ನನಗೆ.
ಸಾಮಾನ್ಯವಾಗಿ ನೀವು ದೇವರಲ್ಲಿ ಅರ್ಥಾತ್ ಸೃಷ್ಟಿಕರ್ತನಲ್ಲಿ ಬೇಡುವುದಾದರೂ ಏನು? ಅಷ್ಟೊಂದು ಹಣ, ಇಂತಹ ಹುಡುಗಿ, ದೊಡ್ಡನೆಯ ಕೆಲಸ. ನೀನು ಯಾವತ್ತೂ ಕೂಡ ನಿನ್ನದನ್ನು ಮಾತ್ರ ಕೇಳಿಕೊಳ್ಳುತ್ತಿದ್ದರೆ ಆತ ನಿನ್ನನ್ನು ಸ್ವಾರ್ಥಿ ಅಂದುಕೊಳ್ಳಲಾರಲೇನು? ಸ್ವಾರ್ಥಿಯಂಥಹ ಹೀನ ಬುದ್ದಿಯವನಿಗೆ ಅವನಾದರೂ ಹೇಗೆ ನೀಡಲು ಸಾಧ್ಯ? ಅವನಿಗೂ ಒಂದು ನೀತಿ ಸಂಹಿತೆ ಅನ್ನೋದು ಇರುತ್ತೇ ಅಲ್ವ? ನೀವು ಪ್ರಾರ್ಥನೆಗೆಂದು ಜೋಡಿಸಿದ ಕರಗಳು ಎಷ್ಟರಮಟ್ಟಿಗೆ ಶುದ್ದವಾಗಿವೆ? ಎಷ್ಟೋ ಅನ್ಯಾಯಗಳನ್ನು ಅದೇ ಕೈಗಳಿಂದ ಮಾಡಿರುತ್ತೀರಿ, ಮೋಸಗಳನ್ನು ಮಾಡಿರುತ್ತೀರಿ, ತಂದೆ ತಾಯಿಯರನ್ನು ಅದೇ ಕೈಗಳಿಂದ ಆಚೆ ನೂಕಿರಿರುವಿರಿ. ಈಗ ಅದೇ ಕೈಗಳಿಂದ ಆತನಲ್ಲಿ ಬೇಡುವಲ್ಲಿ ನಿಮ್ಮ ನೈತಿಕತೆ ನಿಮ್ಮ ಕಡೆಗೆ ಏನನ್ನು ಕೇಳಲಾರದೆ? ಅವನಾದರೂ ಹೇಗೆ ತಾನೇ ಕೊಟ್ಟಾನು? ಈಗ ನಿಮಗೆ ಕೊಟ್ಟಿರುವ ಸಧೃಡ ದೇಹ, ಆರೋಗ್ಯಯುತ ಇಂದ್ರಿಯಗಳಿಂದ, ಸ್ವಚ್ಚ ಮನಸ್ಸಿನಿಂದ ನೀನೇನು ಸಾಧಿಸಿದೀಯಾ ಎಂದು ಕೇಳಿದರೆ ನಿನ್ನಲ್ಲಿ ಉತ್ತರವಿದೆಯಾ? ಅವುಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳದೇ ನಾವು ಮತ್ತೇ ಮತ್ತೇ ಬೇಡಿದರೆ ಹೇಗೆ ಕೊಡಲು ಸಾಧ್ಯ?
ಪ್ರಾರ್ಥನೆ ಒಂದು ಮಾನಸಿಕ ಸ್ಥಿತಿ. ಸಮಾಧಾನ ನೀಡುತ್ತೆ ಅದು ನಮ್ಮ ವೈಯಕ್ತಿಕ ವಿಚಾರವೆಂದು ನೀವು ಭಾವಿಸಬಹುದು. ಸರಿ ನಿಮ್ಮ ವೈಯಕ್ತಿಕವೇ. ಯಾಕೆ ಹಾಗೆ ಸುಮ್ಮನೆ ಪ್ರಾರ್ಥಿಸುತ್ತಾ ಕೂತು ನಿಮ್ಮ ಸಮಯ, ಸಂಪತ್ತು ಹಾಳು ಮಾಡಿಕೊಳ್ಳುತ್ತೀರಿ? ಅಷ್ಟೇ ಅಲ್ಲದೇ ನಿಮ್ಮ ಅಕ್ಕಪಕ್ಕದವರಿಗೆ ಕಿರಿ ಕಿರಿಯನ್ನುಂಟು ಮಾಡುತ್ತೀರಿ. ಬಲವಂತವಾಗಿ ಹೇರುತ್ತೀರಿ. ಸಮಾಜ ನಿಮ್ಮ ಮೇಲೆ ಪ್ರಭಾವ ಬೀರಿದಂತೆ, ನಿಮ್ಮಿಂದ ಸಮಾಜದ ಮೇಲೆ ಬೀರುವ ಪ್ರಭಾವಕ್ಕೆ ನೀವೇ ಹೊಣೆ ಅಲ್ಲವೇ?
ನಮಗೊಂದಿಷ್ಟು ನೆಮ್ಮದಿ ಸಿಗುತ್ತೆ, ಸಂತೋಷ ಸಿಗುತ್ತೇ ಅನ್ನುವುದಾದರೇ ಅದಕ್ಕೊಂದು ಧ್ಯಾನವಿದೆ, ಮೌನವಿದೆ, ದಾನವಿದೆ. ಸಾವಿರ ದಾರಿಗಳಿವೆ. ಅದು ನಮ್ಮನ್ನು ನಾವು ಕಂಡುಕೊಳ್ಳುವ ಸ್ಥಿತಿ. ಅಚಲ ಸ್ಥಿತಿ. ನಮ್ಮನ್ನು ನಾವು ಕಂಡುಕೊಳ್ಳದೇ ಸೃಷ್ಟಿಕರ್ತನನ್ನು ತಿಳಿಯುವುದು ಎಂತಹ ಮೂರ್ಖತನವಲ್ಲವೇ?
ಪ್ರಾರ್ಥನೆಯ ವಿಷಯವಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ. ಪ್ರಾರ್ಥನೆಯನ್ನು ಒಂದು ಅಡಂಬರ, ಇನ್ನೊಬ್ಬರಿಗೆ ಕಿರಿ ಕಿರಿಯನ್ನುಂಟು ಮಾಡಲಿಕ್ಕೆ ಇರುವ ವಸ್ತವನ್ನಾಗಿ ಮಾಡಿಕೊಂಡಿದ್ದೀವಾ ಅನಿಸುತ್ತಿದೆ. ಸೃಷ್ಟಿಕರ್ತನನ್ನು ಪ್ರಾರ್ಥನೆಯಲ್ಲಿ ಮರುಳು ಮಾಡಿ ಗೆದ್ದು ಬಿಡುತ್ತೇವೆ ಎಂಬ ಮೂಢ ಭಾವವೇಕೆ? ಆತ ಪ್ರಾಣಕೊಟ್ಟು ಕಳುಹಿಸಿದ ಅಂದ ಮೇಲೆ ಅವನಿಗೆ ಯಾವ ಸಮಯಕ್ಕೆ ಏನು ಕೊಡುಬೇಕೆಂದು ಚನ್ನಾಗಿ ತಿಳಿದಿದೆ. ಅದರ ಬದಲಿಗೆ ನಿನಗೆ ನೀಡಿರುವ ಕೆಲಸವನ್ನು ನೀನು ಪ್ರಾಮಾಣಿಕವಾಗಿ, ಸಮರ್ಥವಾಗಿ ನಿಭಾಯಿಸುವ ಕಡೆ ಗಮನಕೊಡು. ಅದಕ್ಕೆಂದೆ ತಾನೇ ತಾಯಿ ಮದರ್ ಥೆರೆಸಾ ‘ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ, ಕಾರ್ಯ ಮಾಡುವ ಕೈಗಳೇ ಶ್ರೇಷ್ಟ’ವೆಂದು ಹೇಳಿದ್ದು. ಎಲ್ಲಾ ಮಹಾತ್ಮರು, ಆದರ್ಶ ಪುರುಷರ ವಾದವೂ ಅದೇ ಆಗಿದೆ. ಆದರೆ ನಮ್ಮಂಥಹ ಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ ಅಷ್ಟೇ.
ಚೆನ್ನಾಗಿದೆ ಸರ್ ಪ್ರಾರ್ಥನೆಯ ಬಗ್ಗೆ ಹೊಸತು ನೋಟವನ್ನು ಹೂಡುಕಿದ್ದೀರಿ. ನಿಜವಾಗಿಯೂ ನಾವು ಕೇಳುವುದು ನಮ್ಮ ಹತ್ತಿರ ಇಲ್ಲದಿರುವುದು ಅಥವ ಇನ್ನೂ ಹೆಚ್ಚು ಬೇಕಾದುದನ್ನು. ಅಲ್ಲ ನೀವ್ಯಾಕ್ ಆಧ್ಯಾತ್ಮದ ಕಡೆ ಬಂದ್ರಿ..
ಪ್ರತ್ಯುತ್ತರಅಳಿಸಿಆಧ್ಯಾತ್ಮದಕ್ಕೂ ನಂಗೂ ಸ್ವಲ್ಪ ದೂರನೇ... ಆದರೂ!
ಅಳಿಸಿ