ಆಸೆಗೆ ಆರೋಗ್ಯ ಮಾರಾಟಕಿದ್ಯಾ?
ನಮ್ಮ ಮಗುವಿಗೆ ಒಂಚೂರು ಶೀತವಾದರೆ ಸಾಕು ಹಾಸ್ಪಿಟಲ್ ಗೆ ಹೊತ್ತುಕೊಂಡು ಓಡುತ್ತೇವೆ. ಆ ಮಗುವಿನ ದೇಹದಲ್ಲಿ ರಕ್ತದ ನಾಳಗಳೇ ಸಿಗದಿದ್ದರೂ ಹಿಂಡಿ ಹಿಂಡಿ ರಕ್ತ ಎಳೆದು ಹತ್ತು ಹಲವು ಪರೀಕ್ಷೆಗಳನ್ನು ಮಾಡಿ ಊಟಕ್ಕಿಂತ ಜಾಸ್ತಿಯೇ ಅನಿಸುವಷ್ಟು ಔಷಧಿ ಮಾತ್ರೆಗಳನ್ನು ಹೊತ್ತುಕೊಂಡು ಬರುತ್ತೇವೆ. ಮಕ್ಕಳೇ ಆಗಿರಬಹುದು, ದೊಡ್ಡವರೇ ಆಗಿರಬಹುದು ಇಂದು ಆರೋಗ್ಯವೆಂದರೆ ಅದು ಬಹುಪಾಲು ಆಸ್ಪತ್ರೆ, ಮಾತ್ರೆ, ಔಷಧಿಯೇ ಆಗಿದೆ. ಒಂದು ಸಣ್ಣ ತಲೆನೋವು ಕೂಡ ಒಂದೆರಡು ಮಾತ್ರೆಗಳನ್ನು ಬಯಸುತ್ತದೆ.
ಬಹುಶಃ ಇಂದಿನ ಜನರೇಷನ್ ಗೆ ಗೊತ್ತಿಲ್ಲ ಅಂದುಕೊಳ್ಳುತ್ತೇನೆ. ನಾನು ಕೂಡ ಸೇರಿದಂತೆ ಆಗಿನ ಕಾಲದಲ್ಲಿ ಈ ಶೀತ, ಕೆಮ್ಮು, ತಲೆನೋವುಗಳಿಗೆ ಯಾರೂ ತಲೆಕೆಡಿಸಿಕೊಂಡಿದ್ದು ನೆನಪಿಲ್ಲ. ಒಂದು ಕಪ್ ಶುಂಠಿ ಕಷಾಯ ಸಾಕು ಎಲ್ಲವನ್ನೂ ಸರಿಯಾಗಿಸುತ್ತದೆ ಅಂದುಕೊಂಡಿದ್ದರು. ಎಷ್ಟೋ ಬಾರಿ ಆಡುವಾಗ, ಓಡುವಾಗ ಬಿದ್ದು ತಲೆ ತೂತು ಬಿದ್ದರೆ ರಕ್ತ ಹರಿದು ಬಟ್ಟೆಯಲ್ಲಾ ಕೆಂಪಾಗಿದ್ದರೂ ತಲೆಗೆ ಕಾಫಿ ಪುಡಿ ತುರುಕಿ ರಕ್ತ ನಿಲ್ಲಿಸಿ ಏನೂ ಹಾಗೆಯೇ ಇಲ್ಲ ಅನ್ನುವ ರೀತಿ ಇರುತ್ತಿದ್ದರು. ಎರಡು ಮೂರು ದಿನಕ್ಕೆ ಆ ಗಾಯವೂ ಆ ನೋವು ಕೂಡ ಮರೆತು ಹೋಗುತ್ತಿತ್ತು. ಅವರಿಗೆ ಆರೋಗ್ಯದ ಬಗ್ಗೆ ಗಂಟೆಗಟ್ಟಲೇ ಭಾಷಣವಾಗಲಿ, ಪುಟಗಟ್ಟಲೇ ವಿವರಣೆಯಾಗಲಿ ಯಾರೂ ಕೊಡುತ್ತಿರಲಿಲ್ಲ. ಅವರಿಗೆ ಬೇಕು ಕೂಡ ಆಗಿರಲಿಲ್ಲ. ಆದರೂ ಅವರು ಅದೆಷ್ಟು ಬಲಿಷ್ಢವಾಗಿ ಆರೋಗ್ಯಯುತವಾಗಿ ಬದುಕುತ್ತಿದ್ದರು. 'ಏನು ನಿಮ್ಮ ಮಾತಿನ ಅರ್ಥ ರಕ್ತ ಬಂದರೆ ಕಾಫಿ ಪುಡಿ ತುರುಕಬೇಕು ಅಂತಲೇ!?' ಅಂತ ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಕಾಫಿ ಪುಡಿ ಅದೊಂದು ಔಷಧವೆಂದು ಯಾರೂ ಒಪ್ಪಲಾರರು. ಆದರೂ ಆಗ ಅದರಿಂದ ಅವರು ಕಂಡುಕೊಂಡ ಪರಿಹಾರ ಒಂದು ಮೆಚ್ಚುಗೆ ತರುವಂತೆ ಮಾಡಿತ್ತು.
ಆದರೆ ಈಗ ನಾವ್ಯಾಕೆ ಹೀಗೆ!? ನಮ್ಮ ಆರೋಗ್ಯದ ಕಲ್ಪನೆ ಯಾವುದು? ನಮ್ಮ ಬದುಕಿನ ಶೈಲಿ ಯಾವುದು? ಇದುವರೆಗೆ ಯಾವುದು ಸ್ಪಷ್ಟವೆನಿಸುತ್ತಿಲ್ಲ. ಅಂದಾಗಲಿ, ಇಂದಾಗಲಿ ಆರೋಗ್ಯವೇ ಮುಖ್ಯವಾದದ್ದು. ಅದಕ್ಕೆಂದೆ ತಾನೆ ನಮ್ಮ ಹಿರಿಯರ ಬಾಯಲ್ಲಿ ' ಆ ದೇವರು ನಿನಗೆ ಆರೋಗ್ಯ, ಆಯಸ್ಸು ಕರುಣಿಸಲಿ' ಎಂಬ ಹಾರೈಕೆ ಬರುತ್ತಿದ್ದದ್ದು. ನಮ್ಮ ಇಂದಿನ ಹದಗೆಟ್ಟ ಆರೋಗ್ಯ ಸ್ಥಿತಿಗೆ ನಮ್ಮ ಆಧುನಿಕ ಜೀವನ ಶೈಲಿ ಕಾರಣವಾಗಿರುವುದಂತು ಸತ್ಯ. ಬಹುತೇಕರು ಖಾಯಿಲೆ ಬರುವುದು ಬರೀ ದೇಹಕ್ಕೆಂದು ಭಾವಿಸಿಕೊಂಡಿರುವಂತಿದೆ. ಹಲವು ಖಾಯಿಲೆಗಳ ಮೂಲ ಮೊದಲು ಮನಸ್ಸು. ಮನಸ್ಸು ನುಡಿದಂತೆ ದೇಹ ಕೇಳುತ್ತಾ ಹೋಗುತ್ತದೆ. ನಾವು ಮಾನಸಿಕವಾಗಿ ದುರ್ಬಲರಾಗುತ್ತಾ ಹೋಗುತ್ತಿದ್ದೇವೆ. ಆಧುನಿಕ ಬದುಕಿನ ಜಂಜಾಟ ನಮ್ಮಲ್ಲಿ ಖಿನ್ನತೆ, ಕೀಳರಿಮೆ, ಒತ್ತಡ ಇವುಗಳನ್ನೆಲ್ಲಾ ತಂದು ಅವುಗಳ ಮೂಲಕ ಅನೇಕ ಖಾಯಿಲೆಗಳು ದಾಳಿಯಿಡುವಂತೆ ನೋಡಿಕೊಳ್ಳುತ್ತಿವೆ. ಮತ್ತು ನಮ್ಮ ದುಡಿಮೆಯ ಕ್ರಮ, ಆಸೆಗೆ ಬಿದ್ದು ವಿಶ್ರಾಂತಿಯಿಲ್ಲದ ಸತತ ದುಡಿಮೆಯೂ ಇದಕ್ಕೆ ಕಾರಣವಿದೆ.ಸ್ವಚ್ಚತೆಯ ವಿಷಯದಲ್ಲಿ ನಾವಿನ್ನೂ ಬಹಳ ದೂರ ಸಾಗಬೇಕಿದೆ.
ಮಕ್ಕಳನ್ನು ಬೆಳೆಸುವ ಪರಿ ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಅವರು ಹೊರಗಿನ ಪರಿಸರದಲ್ಲಿ ಗಟ್ಟಿಯಾಗಿ ನಿಲ್ಲುವ ಬದಲಿಗೆ ಸದಾ ಪ್ರಿಜ಼್ ನಲ್ಲಿಟ್ಟ ವಸ್ತುವಿನಂತೆ ಆಡುತ್ತೇವೆ. ಆಹಾರ ಕ್ರಮದಲ್ಲೂ ಕೂಡ ತುಂಬಾ ಬದಲಾವಣೆಯಾಗಿದೆ. ನಾವು ನಿತ್ಯ ಸ್ವಲ್ಪ ಸ್ವಲ್ಪ ವಿಷವನ್ನು ಆಹಾರದ ಮೂಲಕ ತೆಗೆದುಕೊಳ್ಳುತ್ತಿದ್ದೆವೆಯೇನೊ ಅನಿಸುತ್ತಿದೆ. ಇದರಿಂದ ಸ್ವಾಭಾವಿಕ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಗ್ಗಿ ಹೋಗುತ್ತದೆ. ಹೇಳದೆ ಕೇಳದೆ ಖಾಯಿಲೆಗಳು ಬಂದು ಕೂರುತ್ತವೆ. ಆ ಕಾಲದಲ್ಲಿ ಒಳಗಿನಿಂದ ಎದುರಿಸಿ ನಿಲ್ಲಬಹುದಾದ ನಿರೋಧಕ ಶಕ್ತಿ ಹೆಚ್ಚಿದ್ದರಿಂದ ಈ ಸಮಸ್ಯೆ ಇರಲಿಲ್ಲ. ಆಗ ಏನೂ ಚಿಕಿತ್ಸೆ ಕೊಟ್ಟಕೊಳ್ಳದಿದ್ದರೂ ಗುಣಮುಖದತ್ತ ವಾಲುತ್ತಿತ್ತು. ಯಾಕೆಂದರೆ ಮೂಲತಃವಾಗಿ ಅಂತಹ ಗುಣವನ್ನು ದೇಹ ಪಡೆದುಕೊಂಡು ಬಂದಿರುತ್ತದೆ. ಈಗ ಅದರ ಮೂಲ ಗುಣವೇ ಅಲುಗಾಡಿದಂತಾಗಿರುವುದು ಇಂದಿನ ದಾರಿ ತಪ್ಪಿದ ಅನಾರೋಗ್ಯದ ಸ್ಥಿತಿಗೆ ಕಾರಣವಲ್ಲವೇ!?
ಇಂದು ನಮ್ಮ ಆಧುನಿಕತೆ ಅನಾರೋಗ್ಯದ ತೊಳಲಾಟಕ್ಕೆ ನಂಬಿಕೆಯ ಕೊರತೆಯು ಒಂದು ಕಾರಣವಾಗಿದೆ. ನಮಗೆ ನಮ್ಮ ವೈದ್ಯರ ಮೇಲೆ, ತಾವು ತೆಗೆದುಕೊಳ್ಳುವ ಔಷಧಿಯ ಮೇಲೆ, ಔಷಧಿ ಪದ್ದತಿಯ ಮೇಲೆ ಅಷ್ಟೊಂದು ನಂಬಿಕೆಯಿಲ್ಲ. ಅನುಮಾನಿಸುವುದು ಈಗಿನ ಕಾಲದ ಗುಣ. ಅದನ್ನು ಇಲ್ಲಿಯೂ ತಂದು ಕೂರಿಸಿಕೊಂಡಿದ್ದೇವೆ. ಹಿಂದೆ ನಂಬಿಕೆ ಇತ್ತು. ಬಿದ್ದು ಮಂಡಿ ಕೆತ್ತಿದಾಗ ರಕ್ತ ಒಸರುವ ಜಾಗಕ್ಕೆ ಮಣ್ಣು ಹಾಕಿಕೊಳ್ಳುತಿದ್ದೇವು. ಅಲ್ಲಿ ನಮಗೊಂದು ನಂಬಿಕೆಯಿತ್ತು. ಮಣ್ಣು ವಾಸಿ ಮಾಡದಿದ್ದರೂ ಆ ನಂಬಿಕೆ ನಮ್ಮನ್ನು ವಾಸಿಮಾಡುತ್ತಿತ್ತು. ಈಗ ನಮ್ಮಲ್ಲಿ ಅನೇಕರು ಆರ್ಯುವೇದವನ್ನು ಅನುಸರಿಸಲು ಪ್ರಾರಂಭಿಸುತ್ತಾರೆ, ಮೂರು ತಿಂಗಳು ಅದೇನು ಪರಿಣಾಮಕಾರಿಯಾಗದಿದ್ದರೆ ಬದಲಾಯಿಸುವ ಯೋಚನೆ ಅವರಿಗಾಗಲೇ ಮನಸ್ಸಲ್ಲಿ ಬಂದಿರುತ್ತದೆ. ಅವರಿಗೆ ಈಗ ಸಡನ್ ಬದಲಾವಣೆ ಬೇಕಿದೆ. ಅದು ಅಲ್ಲಿ ಸಾಧ್ಯವಾಗದಿದ್ದರೆ ಅಲೋಪತಿಗೊ, ಹೋಮಿಯೊಪತಿಗೊ ಹಾರಿ ಬಿಡುತ್ತಾರೆ. ಅಲ್ಲೂ ಕೂಡ ಅದೇ ರಾಗ. ಎಲ್ಲಿಯೂ ಕೂಡ ನಂಬಿ ಉಳಿಯಲಾರರು.
ಈ ಕಾಲದಲ್ಲಿ ಆರೋಗ್ಯವಾಗಿರುವುದಕ್ಕೆ ಏನೆಲ್ಲಾ ಬೇಕು ಅದನ್ನು ಬಿಟ್ಟು ಅದರ ಬದಲಿಗೆ ಅನಾರೋಗ್ಯವನ್ನು ಮೈಮೇಲೆ ಎಳೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೆವಾ!? ಅನಿಸುತ್ತಿದೆ. ನಮ್ಮ ಜೀವನ ಕ್ರಮವನ್ನು ಒಂದಿಷ್ಟುನ್ನು ಬದಲಾಯಿಸಿಕೊಳ್ಳದೇ ನಮಗೆ ಮಂತ್ರದಂಡದ ರೀತಿಯಲ್ಲಿ ಎಲ್ಲವೂ ಸರಿಯಾಗಿ ಬಿಡಬೇಕೆಂದರೆ ಹೇಗೆ ಸಾಧ್ಯ ಅಲ್ಲವೇ? ಒಮ್ಮೆ ಯೋಚಿಸಿ ನೋಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ