ಹೊಸ್ತಿಲಾಚೆಯ ಬೆತ್ತಲೆ 05

ಈ ಜಗತ್ತನ್ನು ನೀಡಿ ಹೊಟ್ಟೆಕಿಚ್ಚಾಗುತ್ತೆ ಸರ್! 


ಸರ್ ನಾವು ಹೆಣ್ಣಾಗಿರುವ ತಪ್ಪಿಗೆ ಆಳ್ತಿವಾ? ನಾವು ಹೆಣ್ಣುಗಳು ಅಂತ ಮತ್ತೆ ಮತ್ತೆ ಅಳುಸ್ತಾನಾ ಆ ದೇವ್ರು ಗೊತ್ತಿಲ್ಲ. ಆದರೆ ಅದನ್ನು ಮೀರಿ ಕಣ್ಣೀರು ನಂಗೆ ಹ್ಯಾಬಿನೇ ಆಗಿಬಿಟ್ಟಿದೆ. ಬಲು ಬೇಗ ಬುದ್ದಿ ಬಂದು ಬಿಡಬಾರದು ಸರ್. ಏನೋ ಗೊತ್ತಿಲ್ಲ ನನ್ನ ತಂದೆ ತನ್ನ ಬುದ್ದಿನ ನನ್ನ ಕೈಯಲ್ಲಿಟ್ಟು ಹೊರಟು ಹೋದ್ರು ಅನಿಸುತ್ತೆ. ನಿತ್ಯ ಮಲಗುವಾಗ ಬದುಕಿಗೆ ನಾ ಸೋತೆ ಅಂತ ಹೇಳಿಕೊಂಡು ಮಲಗ್ತಿನಿ ; ಕೇಳಿಸಿಕೊಂಡ ಬದುಕಿಗೆ ಕರುಣೆ ಬಂದು ನಾಳೆಯಾದರೂ ನನ್ನ ಗೆಲ್ಲಿಸಲಿ ಅಂತ. ಇಲ್ಲ ಸರ್ ಯಾವತ್ತೂ ಗೆಲ್ಲಲ್ಲ ನಾನು. ನನ್ನ ವಯಸ್ಸಿನ ಹುಡುಗಿಯರು ಅದೆಷ್ಟು ಖುಷಿಯಾಗಿ ಲೈಫ್ನ ಸುಂದರವಾಗಿ ಕಳಿತಾರೆ. ಬಾಯ್ ಪ್ರೆಂಡ್, ಸಿನೆಮಾ, ಸಾಕುಯೆನಿಸುವವರೆಗೂ ಓದು, ಇಷ್ಟಪಟ್ಟ ಬಟ್ಟೆ ಎಲ್ಲವೂ ಸಿಗುತ್ತೆ. ಈ ಜಗತ್ತನ್ನು ಕಂಡು ಹೊಟ್ಟೆಕಿಚ್ಚಾಗುತ್ತೆ ಸರ್. ಅವರಿಗೆ ಇಷ್ಟವಾದಾಗ ಮದುವೆಯಂತದ್ದು ಮಾಡಿಕೊಂಡು ಲೈಫ್ನಲ್ಲಿ ಸೆಟ್ಲು ಕೂಡ  ಆಗಿ ಬಿಡ್ತಾರೆ. ಆದರೆ ನಂಗೆ ಯಾಕೆ ಸರ್ ಹೀಗೆ? ಅಪ್ಪ ನನ್ನ ಬಿಟ್ಟು ಹೋದಾಗ ನನಗೆ ಹದಿನೆಂಟು. ಮಧ್ಯ ವಯಸ್ಸು ದಾಟಿದ ಅಮ್ಮ. ಬೆಂಗಳೂರು ಸೇರಿಕೊಂಡು ವರ್ಷವಾದರೂ ನೆನಪು ಮಾಡಿಕೊಳ್ಳದ ಅಣ್ಣ, ಉಳಿದಿರುವ ಹಳೆಯ ಸಾಲ. ಒಂಚೂರು ಚಂದ ಇದೀನಿ ಅನ್ನೋ ಕಾರಣಕ್ಕೆ ಒಂಟಿಯನ್ನೊ‌ ಕಾರಣಕ್ಕೆ ಎನ್ ಕ್ಯಾಶ್ ಗೆ ಕಾಯೋ ಗಂಡಸರು. ಸಾಸಿವೆ ಜೀರಿಗೆಯಿಂದ ಹಿಡಿದು ಕಿತ್ತು ಹೋದ ಮನೆಯ ನಲ್ಲಿಯನ್ನು ತಂದು ಹಾಕುವವರೆಗೂ ಎಲ್ಲದು ನನ್ನದೆ. ಇವೆಲ್ಲವನ್ನೂ ನಿಭಾಯಿಸಲೋಸುಗ ಒಂದು ಸಣ್ಣ ನೌಕರಿ. ಹೆಣವಾಗುವ ಹಾಗೆ ದುಡಿಸಿಕೊಳ್ತಾರೆ ಸರ್. ಪರದೆ ಮುಂದೆ ಆ್ಯಂಕರ್ ಆಗ್ಬೇಕು ಅನ್ನೊದು ನನ್ನ ಬಹು ದೊಡ್ಡ ಕನಸು. ಈಗ ಅದನ್ನ ಗಂಟು ಕಟ್ಟಿ ಹೊಳೆಗೆ ಎಸೆದು ಬಿಟ್ಟಿದೀನಿ ಸರ್. 

ನಾ ಮದುವೆಯಾಗಿ ಹೋದ್ರೆ ಅಮ್ಮನಿಗೆ ಯಾರಿದಾರೆ ಸರ್? ಅಣ್ಣ ಅದ್ಯಾಕೆ ಹಾಗೆ ಅದ್ನೊ ಗೊತ್ತಿಲ್ಲ. ಈ ಗಂಡು ಮಕ್ಳು ಯಾಕೆ ಹೀಗೆ ಸರ್? ಕೇವಲ ಇಪ್ಪತ್ತೆರಡನೇ ವಯಸ್ಸಿಗೆ ಇಷ್ಟೆಲ್ಲಾ ಜವಾಬ್ದಾರಿ ಹೇಗೆ ಸರ್ ನಿಭಾಯಿಸೋದು!? ಹರಯ, ಕನಸು, ಸುಖ, ಖುಷಿ ಇವೆಲ್ಲ ತುಂಬಿರುವ ಜೀವನ ಘಟ್ಟದಲ್ಲಿ ನನ್ನದು ಎಂತಹ ರೋಧನೆ ಅಲ್ವ ಸರ್? ನಿಜವಾದ ಮೋಸಗಾರ ಯಾರೂ ಅಲ್ಲ ಸರ್ ಆ ದೇವರು ಮಾತ್ರ. ಆದರೆ ಸೋಲ್ತಿನಿ ಅನ್ನೊ ಭಯ ಇಲ್ಲ ಸರ್, ನಿತ್ಯ ಗೆಲ್ತಾನೆ ಹೋಗ್ತಿದೀನಿ. ಬದುಕಿನ ಬಗ್ಗೆ ಭರವಸೆ ಇದೆ. ನಾಳೆ ನಂಗೂ ಒಳ್ಳೆ ದಿನ ಬರುತ್ತೆ ಅಲ್ವಾ ಸರ್!? ಅಂತ ಆ ಹುಡುಗಿ ಕಣ್ಣಲ್ಲಿ ನೀರು ತಂದು ಕೊಂಡು ಅಂದಾಗ ತತ್ವಜ್ಞಾನಿಯಂತೆ ಸಮಾಧಾನಕ್ಕೆ ಇಳಿಯಲಿಲ್ಲ ನಾನು. ಅವಳ ತಲೆಯನ್ನು ಸವರಿ ಸುಮ್ಮನೆ ಅವಳ ತುಂಬಿದ ಕಣ್ಣುಗಳನ್ನು ನೋಡಿದೆ. ಅದರಲ್ಲಿ ಅವಳು ಸಮಾಧಾನ‌ ಹುಡುಕಿಕೊಂಡಳೊ? ಸಾಂತ್ವನ ಕಂಡುಕೊಂಡಳೊ, ತಿರಸ್ಕಾರವ ಭಾವಿಸಿಕೊಂಡಳೊ, ಗಂಡಸ್ಸು ಜಾತಿಯ ಮತ್ತೊಬ್ಬ ಪ್ರತಿನಿಧಿ ಅಂದು‌ ಕೊಂಡಳೊ!? ಗೊತ್ತಿಲ್ಲ. ಹೃದಯಕ್ಕೆ ಅಬಿಧಮನಿಗಳು ರಕ್ತದ ಬದಲು ಕಣ್ಣೀರು ತಂದಿದ್ದವು. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸ್ವಾರ್ಥಿಯಾಗದ ಹೊರೆತು ನೀ ಏನನ್ನೂ ಕೂಡ ಕೊಡಲಾರೆ!

ಕೆಂಪು ಪೆಪ್ಪರಮೆಂಟು ; ಬಾವುಟದ ನಂಟು!

ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ?